ಭೂತಾನ್ ಗಡಿಯಲ್ಲಿ ಚೀನಾದ ನೂತನ ವಸಾಹತು ನಿರ್ಮಾಣದಿಂದ ಭಾರತದ ಮೇಲೆ ಬೃಹತ್ ಪರಿಣಾಮ: ವರದಿ

ಸಾಂದರ್ಭಿಕ ಚಿತ್ರ:PTI
ಹೊಸದಿಲ್ಲಿ,ಜ.12: ಚೀನಾ ಭೂತಾನದೊಂದಿಗಿನ ತನ್ನ ವಿವಾದಾತ್ಮಕ ಗಡಿಯಲ್ಲಿ ವಸಾಹತು ನಿರ್ಮಾಣ ಕಾಮಗಾರಿಯನ್ನು ಚುರಕುಗೊಳಿಸಿದೆ. ಆರು ಸ್ಥಳಗಳಲ್ಲಿ ಎರಡಂತಸ್ತಿನ ಕಟ್ಟಡಗಳು ಸೇರಿದಂತೆ 200ಕ್ಕೂ ಅಧಿಕ ರಚನೆಗಳು ತಲೆಯೆತ್ತುತ್ತಿವೆ ಎಂದು ರೂಟರ್ಸ್ ಸುದ್ದಿಸಂಸ್ಥೆಗಾಗಿ ಅಮೆರಿಕದ ಡಾಟಾ ವಿಶ್ಲೇಷಣೆ ಸಂಸ್ಥೆ ಹಾಕ್ಐ 360 ನಡೆಸಿದ ಉಪಗ್ರಹ ಚಿತ್ರದ ವಿಶ್ಲೇಷಣೆಯು ಬೆಟ್ಟು ಮಾಡಿದೆ.
ಭೂ-ಮಟ್ಟದ ಚಟುವಟಿಕೆಗಳ ಬಗ್ಗೆ ಬೇಹು ಮಾಹಿತಿಗಳನ್ನು ಸಂಗ್ರಹಿಸಲು ಉಪಗ್ರಹಗಳನ್ನು ಬಳಸುವ ಹಾಕ್ಐ 360 ರೂಟರ್ಗೆ ಒದಗಿಸಿರುವ ಮತ್ತು ಇತರ ಇಬ್ಬರು ತಜ್ಞರಿಂದ ಪರಿಶೀಲಿಸಲ್ಪಟ್ಟಿರುವ ಚಿತ್ರಗಳು ಮತ್ತು ವಿಶ್ಲೇಷಣೆ ವರದಿ ಭೂತಾನನೊಂದಿಗಿನ ತನ್ನ ಮುಂಚೂಣಿ ಪ್ರದೇಶದಲ್ಲಿ ಚೀನಾದ ಇತ್ತೀಚಿನ ನಿರ್ಮಾಣಗಳ ಕುರಿತು ವಿವರವಾದ ನೋಟವನ್ನು ನೀಡಿದೆ.
ಉಪಗ್ರಹ ಚಿತ್ರಣ ಸಂಸ್ಥೆಗಳಾದ ಕ್ಯಾಪೆಲ್ಲಾ ಸ್ಪೇಸ್ ಮತ್ತು ಪ್ಲಾನೆಟ್ ಲ್ಯಾಬ್ಸ್ ಒದಗಿಸಿರುವ ಮಾಹಿತಿಗಳ ಆಧಾರದಲ್ಲಿ ಚೀನಾ ಮೊದಲಿಗೆ ರಸ್ತೆಗಳ ನಿರ್ಮಾಣ ಮತ್ತು ಪ್ರದೇಶದಲ್ಲಿ ತೆರವು ಕಾರ್ಯಾಚರಣೆಯೊಂದಿಗೆ 2020ರ ಆರಂಭದಿಂದ ಭೂತಾನಿನ ಪಶ್ಚಿಮ ಗಡಿಯುದ್ದಕ್ಕೂ ಕೆಲವು ಸ್ಥಳಗಳಲ್ಲಿ ನಿರ್ಮಾಣ ಸಂಬಂಧಿತ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು ಹಾಕ್ಐ 360ರ ಮಿಷನ್ ಅಪ್ಲಿಕೇಷನ್ಸ್ ಡೈರೆಕ್ಟರ್ ಕ್ರಿಸ್ ಬಿಗರ್ಸ್ ಹೇಳಿದರು.
2021ರಲ್ಲಿ ಕಾಮಗಾರಿಗಳು ವೇಗ ಪಡೆದುಕೊಂಡಿದ್ದನ್ನು ಉಪಗ್ರಹ ಚಿತ್ರಗಳು ತೋರಿಸಿವೆ. ಬಹುಶಃ ಮನೆ ನಿರ್ಮಾಣ ಸಾಮಗ್ರಿಗಳನ್ನಿರಿಸಲು ಸಣ್ಣ ರಚನೆಗಳು ತಲೆಯೆತ್ತಿದ್ದವು ಮತ್ತು ನಂತರ ಕಟ್ಟಡಗಳ ಶಿಲಾನ್ಯಾಸ ಮತ್ತು ನಿರ್ಮಾಣ ಕಾರ್ಯ ಆರಂಭಗೊಂಡಿದೆ ಎಂದು ಅವರು ತಿಳಿಸಿದರು.
‘ಗಡಿ ವಿಷಯಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡದಿರುವುದು ನಮ್ಮ ದೇಶದ ನೀತಿಯಾಗಿದೆ ’ ಎಂದು ರಾಯಿಟರ್ಸ ಪ್ರಶ್ನೆಗೆ ಉತ್ತರಿಸಿದ ಭೂತಾನಿನ ವಿದೇಶಾಂಗ ಸಚಿವಾಲಯವು ಹೆಚ್ಚಿನ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ.
ಚೀನಾ ತನ್ನ ಮಹತ್ವಾಕಾಂಕ್ಷೆಗಳಿಗೆ ಸದೃಢ ರೂಪವನ್ನು ನೀಡುವ ಮೂಲಕ ತನ್ನ ಗಡಿ ಹಕ್ಕುಗಳನ್ನು ಸಾಧಿಸಲು ಪಟ್ಟು ಹಿಡಿದಿದೆ ಎನ್ನುವುದನ್ನು ಈ ನಿರ್ಮಾಣ ಚಟುವಟಿಕೆಗಳು ಸೂಚಿಸುತ್ತಿವೆ ಎಂದು ಭಾರತೀಯ ರಕ್ಷಣಾ ಮೂಲ ಹಾಗೂ ತಜ್ಞರು ಹೇಳಿದ್ದಾರೆ.
ಸ್ಥಳೀಯ ಜನರ ದುಡಿಮೆಯ ಮತ್ತು ಬದುಕಿನ ಸ್ಥಿತಿಗಳ ಸುಧಾರಣೆಯು ನಿರ್ಮಾಣ ಕಾಮಗಾರಿಗಳ ಏಕೈಕ ಉದ್ದೇಶವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯವು ತಿಳಿಸಿದೆ. ತನ್ನ ಸ್ವಂತ ಭೂಪ್ರದೇಶದಲ್ಲಿ ಸಾಮಾನ್ಯ ನಿರ್ಮಾಣ ಚಟುವಟಿಕೆಗಳನ್ನು ನಡೆಸುವುದು ಚೀನಾದ ಸಾರ್ವಭೌಮ ಹಕ್ಕು ಆಗಿದೆ ಎಂದು ಹೇಳಿರುವ ಸಚಿವಾಲಯವು,ಹೆಚ್ಚಿನ ಪ್ರತಿಕ್ರಿಯೆಗಳನ್ನು ನೀಡಲು ನಿರಾಕರಿಸಿದೆ.
ಈ ಗ್ರಾಮಗಳು ಚೀನಾಕ್ಕೆ ಕೊಂಚ ವ್ಯೊಹಾತ್ಮಕ ಮೌಲ್ಯವನ್ನು ಒದಗಿಸುತ್ತವೆ ಎಂದು ತಜ್ಞರ ಪೈಕಿ ಇಬ್ಬರು ಹೇಳಿದ್ದಾರೆ. ನೂತನ ನಿರ್ಮಾಣ ಕಾಮಗಾರಿಗಳು ಭಾರತ,ಭೂತಾನ ಮತ್ತು ಚೀನಾ ಗಡಿಗಳ ಕೂಡುಸ್ಥಳದಲ್ಲಿಯ ಡೋಕ್ಲಾಮ್ ಪ್ರದೇಶದಿಂದ 9ರಿಂದ 27 ಕಿ.ಮೀ.ದೂರದಲ್ಲಿವೆ. ಇದೇ ಡೋಕ್ಲಾಮ್ನಲ್ಲಿ 2017ರಲ್ಲಿ ಎರಡು ತಿಂಗಳಿಗೂ ಅಧಿಕ ಅವಧಿಗೆ ಭಾರತ ಮತ್ತು ಚೀನಿ ಸೇನೆಗಳ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿತ್ತು.
ಓರ್ವ ತಜ್ಞರು ಮತ್ತು ಭಾರತೀಯ ರಕ್ಷಣಾ ಮೂಲ ತಿಳಿಸಿರುವಂತೆ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ವಸಾಹತುಗಳು ದೂರದ ಪ್ರದೇಶಗಳ ಉತ್ತಮ ನಿಯಂತ್ರಣ ಮತ್ತು ಮೇಲ್ವಿಚಾರಣೆಗೆ ಚೀನಾಕ್ಕೆ ಅನುಕೂಲವನ್ನು ಕಲ್ಪಿಸುತ್ತವೆ ಮತ್ತು ಭದ್ರತಾ ಕೇಂದ್ರಿತ ವ್ಯವಸ್ಥೆಗಳ ಸ್ಥಾಪನೆಗಾಗಿ ಅವುಗಳನ್ನು ಚೀನಾ ಬಳಸಿಕೊಳ್ಳುವ ಸಾದ್ಯತೆಯಿದೆ.
ರಾಯಿಟರ್ಸ ಪ್ರತಿಕ್ರಿಯೆಯನ್ನು ಕೋರಿತ್ತಾದರೂ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಸ್ಪಂದಿಸಿಲ್ಲ.
ಎಂಟು ಲಕ್ಷಕ್ಕೂ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಭೂತಾನ ಉಭಯ ದೇಶಗಳ ನಡುವಿನ 477 ಕಿ.ಮೀ.ಗಡಿಯನ್ನು ಇತ್ಯರ್ಥಗೊಳಿಸಲು ನಾಲ್ಕು ದಶಕಗಳಿಂದಲೂ ಚೀನಾದೊಂದಿಗೆ ಮಾತುಕತೆಗಳನ್ನು ನಡೆಸುತ್ತಿದೆ. ಇದು ಕೇವಲ ಭೂತಾನದ ಪ್ರಾದೇಶಿಕ ಸಮಗ್ರತೆಯ ಸಮಸ್ಯೆಯಲ್ಲ,ಅದು ಭಾರತದ ಮೇಲೆ ಸಂಭಾವ್ಯ ಭದ್ರತಾ ಪರಿಣಾಮಗಳಿಗೂ ಸಂಬಂಧಿಸಿದೆ. ಭಾರತವು ಭೂತಾನಿನ ಮುಖ್ಯ ಮಿತ್ರರಾಷ್ಟ್ರ ಮತ್ತು ಆರ್ಥಿಕ ಪಾಲುದಾರನಾಗಿದೆ.







