ಬಾಲಕಿಗೆ ಲೈಂಗಿಕ ಕಿರುಕುಳ: ಸಿಂಗಾಪುರದಲ್ಲಿ ಭಾರತೀಯನಿಗೆ ಜೈಲು
ಸಿಂಗಾಪುರ, ಫೆ. 18: ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಸಿಂಗಾಪುರದಲ್ಲಿರುವ ಭಾರತೀಯನೊಬ್ಬನಿಗೆ ಅಲ್ಲಿನ ನ್ಯಾಯಾಲಯವೊಂದು ಶುಕ್ರವಾರ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿದೆ.
ಕಳೆದ ವರ್ಷ 11 ವರ್ಷದ ಬಾಲಕಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿರುವುದನ್ನು 30 ವರ್ಷದ ಜೀವಾನಂದನ್ ಗೋವಿಂದನ್ ಜಿಲ್ಲಾ ನ್ಯಾಯಾಲಯದಲ್ಲಿ ಒಪ್ಪಿಕೊಂಡನು. ಅಪರಾಧಿಗೆ ಮೂರು ಛಡಿ ಏಟಿನ ಶಿಕ್ಷೆಯನ್ನು ನೀಡುವಂತೆಯೂ ನ್ಯಾಯಾಲಯವು ಆದೇಶಿಸಿತು ಎಂದು ‘ಟುಡೇ’ ಪತ್ರಿಕೆ ವರದಿ ಮಾಡಿದೆ.
ಸಂತ್ರಸ್ತೆಗೆ ಲೈಂಗಿಕ ಕಿರುಕುಳ ನೀಡಿರುವುದಕ್ಕಾಗಿ ಮಾತ್ರವಲ್ಲ, ಸಂತ್ರಸ್ತೆಯು ತೀರಾ ಎಳೆಯ ಬಾಲಕಿ ಎನ್ನುವ ಕಾರಣಕ್ಕಾಗಿಯೂ ಅಪರಾಧಿಗೆ ಛಡಿ ಏಟು ನೀಡಲು ತಾನು ಆದೇಶಿಸಿದೆ ಎಂದು ಜಿಲ್ಲಾ ನ್ಯಾಯಾಧೀಶ ಕ್ರಿಸ್ಟೋಫರ್ ಗೋಹ್ ಹೇಳಿದರು.
ಪ್ರಾಜೆಕ್ಟ್ ಇಂಜಿನಿಯರ್ ಆಗಿರುವ ಗೋವಿಂದನ್ ಕಳೆದ ವರ್ಷದ ಫೆಬ್ರವರಿ 23ರಂದು ಪಾನಮತ್ತನಾಗಿದ್ದನು ಹಾಗೂ ಚೋ ಚು ಕಾಂಗ್ ಎಂಬಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಬಾಲಕಿಯನ್ನು ಹಿಂಬಾಲಿಸಿ ಲೈಂಗಿಕ ಕಿರುಕುಳ ನೀಡಿದನು ಎಂಬುದಾಗಿ ಆರೋಪಿಸಲಾಗಿದೆ.