ಉಕ್ರೇನ್ ಸಂಘರ್ಷ: ಭಾರತಕ್ಕೆ ತೈಲ ಬೆಲೆಯದ್ದೇ ಚಿಂತೆ

ಹೊಸದಿಲ್ಲಿ: ಉಕ್ರೇನ್ ಸಂಘರ್ಷದಿಂದಾಗಿ ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದ ಹಿನ್ನೆಲೆಯಲ್ಲಿ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಪ್ರತಿ ಬ್ಯಾರಲ್‌ಗೆ 100 ಡಾಲರ್‌ನತ್ತ ಸಾಗಿದೆ. ಮಂಗಳವಾರ ಬ್ರೆಂಟ್ ದರ (ಜಾಗತಿಕ ಬೆಂಚ್‌ಮಾರ್ಕ್ ದರ) ಬ್ಯಾರಲ್‌ಗೆ 98 ಡಾಲರ್ ಆಗಿದ್ದು, ಹೆಚ್ಚುತ್ತಿರುವ ಬೇಡಿಕೆ ಈಡೇರಿಸಲು ಹೆಣಗಾಡುತ್ತಿರುವ ತೈಲ ಮಾರುಕಟ್ಟೆಯಲ್ಲಿ ಆತಂಕಕ್ಕೆ ಕಾರಣವಾಗಿದೆ.
ಭಾರತ ಖರೀದಿಸುವ ಕಚ್ಚಾ ತೈಲ ಮಿಶ್ರಣದ ಬೆಲೆ ಬ್ಯಾರಲ್‌ಗೆ 93.6 ಡಾಲರ್ ಆಗಿದ್ದು, ಇದು ನವೆಂಬರ್‌ನಲ್ಲಿ ಇದ್ದ ಬೆಲೆಗೆ ಹೋಲಿಸಿದರೆ 10 ಡಾಲರ್ ಅಧಿಕ. ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನವೆಂಬರ್‌ನಲ್ಲಿ ಡೀಸೆಲ್ ಮೇಲಿನ ಸೀಮಾ ಸುಂಕವನ್ನು ಲೀಟರ್‌ಗೆ 10 ರೂಪಾಯಿ ಮತ್ತು ಪೆಟ್ರೋಲ್‌ಗೆ 5 ರೂಪಾಯಿಯಷ್ಟು ಕಡಿತಗೊಳಿಸಿತ್ತು.
ಸರ್ಕಾರದ ಅನೌಪಚಾರಿಕ ಸೂಚನೆ ಹಿನ್ನೆಲೆಯಲ್ಲಿ ಆ ಬಳಿಕ ಭಾರತದ ಪೆಟ್ರೋಲ್ ಬಂಕ್‌ಗಳಲ್ಲಿ ಬೆಲೆ ಬದಲಾಗಿರಲಿಲ್ಲ. ಇದೀಗ ತೀವ್ರ ಬೆಲೆ ಏರಿಕೆಯು ಪೆಟ್ರೋಲ್ ಹಾಗೂ ಡೀಸೆಲ್‌ನ ವಾಸ್ತವ ವೆಚ್ಚ ಮತ್ತು ಚಿಲ್ಲರೆ ಮಾರಾಟ ಬೆಲೆಯ ನಡುವೆ ದೊಡ್ಡ ಕಂದಕ ಸೃಷ್ಟಿಸಿದೆ. ಬಾಲ್‌ಪಾರ್ಕ್ ಅಂದಾಜಿನ ಪ್ರಕಾರ, ಕಚ್ಚಾತೈಲದ ಬೆಲೆ 1 ಡಾಲರ್ ಹೆಚ್ಚಿದಂತೆಲ್ಲ ಚಿಲ್ಲರೆ ಮಾರಾಟ ಬೆಲೆ 70-80 ಪೈಸೆ ಹೆಚ್ಚಳವಾಗುತ್ತದೆ. ಇದು ಚಿಲ್ಲರೆ ಮಾರಾಟಗಾರರ ಆದಾಯಕ್ಕೆ ಕತ್ತರಿ ಹಾಕಿದೆ.
ಬೆಲೆ ಪರಿಷ್ಕರಣೆಯನ್ನು ಸ್ಥಗಿತಗೊಳಿಸಿರುವ ಕ್ರಮವನ್ನು ಮಾರ್ಚ್ 7ರಂದು ನಡೆಯುವ ಕೊನೆಯ ಹಂತದ ಮತದಾನದ ಬಳಿಕ ತೆರವುಗೊಳಿಸುವ ಸಾಧ್ಯತೆ ಇದೆ. ಆಗ ಚಿಲ್ಲರೆ ಮಾರಾಟಗಾರರು ಬೆಲೆ ಹೆಚ್ಚಿಸಲಿದ್ದಾರೆ. ಆದರೆ ಹಿಂದಿನ ಆದಾಯ ಕಡಿತವನ್ನು ಸಂಪೂರ್ಣವಾಗಿ ಭರ್ತಿ ಮಾಡಿಕೊಳ್ಳುವುದು ಅಸಾಧ್ಯ. ಆದ್ದರಿಂದ ಇದು ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂನಂಥ ಕಂಪನಿಗಳ ಲಾಭಕ್ಕೆ ಹೊಡೆತ ನೀಡಲಿದೆ.
ಇರಾನ್ ತೈಲವನ್ನು ಮಾರುಕಟ್ಟೆಗೆ ತರುವ ವಿಚಾರದಲ್ಲಿ ಇರಾನ್- ಅಮೆರಿಕ ನಡುವೆ ನಡೆಯುತ್ತಿರುವ ಮಾತುಕತೆ ಫಲಪ್ರದವಾಗದಿದ್ದಲ್ಲಿ, ಉಕ್ರೇನ್ ಸಂಘರ್ಷವು ಮುಂದಿನ ತಿಂಗಳುಗಳಲ್ಲಿ ತೈಲ ಬೆಲೆ ಹೆಚ್ಚಳಕ್ಕೆ ಕಾರಣವಾಗಲಿದೆ.







