14 ವರ್ಷದಿಂದ ಮನೆಬಿಟ್ಟು ವಿಮಾನ ನಿಲ್ದಾಣದಲ್ಲೇ ವಾಸಿಸುತ್ತಿರುವ ಚೀನಾದ ವ್ಯಕ್ತಿ
Photo : PTI
ಬೀಜಿಂಗ್, ಮಾ.31: ಧೂಮಪಾನ ಮತ್ತು ಮದ್ಯಸೇವನೆಯ ಚಟ ಬೆಳೆಸಿಕೊಂಡಿರುವ ಚೀನಾದ ವ್ಯಕ್ತಿಯೊಬ್ಬ ಕಳೆದ 14 ವರ್ಷದಿಂದ ಮನೆ ಬಿಟ್ಟು ವಿಮಾನ ನಿಲ್ದಾಣದ ಆವರಣದಲ್ಲೇ ವಾಸಿಸುತ್ತಿರುವ ಬಗ್ಗೆ ಚೀನಾದ ಮಾಧ್ಯಮಗಳು ವರದಿ ಮಾಡಿವೆ.
ಈಗ 60 ವರ್ಷವಾಗಿರುವ ವೀ ಜಿಯಾಂಗ್ ಸಿಗರೇಟು ಮತ್ತು ಕುಡಿತದ ದಾಸನಾದ ಕಾರಣ 40ನೇ ವಯಸ್ಸಿಗೆ ಕೆಲಸ ಕಳೆದುಕೊಂಡ. 2008ರಿಂದ ಈತ ಬೀಜಿಂಗ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ 2ನೇ ಟರ್ಮಿನಲ್ನಲ್ಲಿ ವಾಸಿಸುತ್ತಿದ್ದಾನೆ. ಈತನಿಗೆ ಸರಕಾರದಿಂದ ಪ್ರತೀ ತಿಂಗಳು ಸುಮಾರು 150 ಡಾಲರ್ ಪಿಂಚಣಿ ದೊರಕುತ್ತಿದೆ. ಈತನ ದಿನಚರಿ ಹೀಗಿದೆ: ದಿನಾ ಬೆಳಿಗ್ಗೆ ಎದ್ದು ಸಮೀಪದ ಮಾರುಕಟ್ಟೆಗೆ ಹೋಗಿ 6 ಬನ್ ಮತ್ತು ಸ್ವಲ್ಪ ಗಂಜಿ ತಿನ್ನುವುದು. ಮಧ್ಯಾಹ್ನದ ಊಟ ಪಾರ್ಸೆಲ್ ಮಾಡಿಸುವುದು ಮತ್ತು ಒಂದು ಬಾಟಲ್ ಸಾರಾಯಿ ಖರೀದಿಸುವುದು. ಜತೆಗೆ ಸಿಗರೇಟು. ಇಷ್ಟಿದ್ದರೆ ಸಾಕು, ಆರಾಮವಾಗಿ ಬದುಕಬಹುದು ಎನ್ನುತ್ತಾನೆ ಜಿಯಾಂಗ್.
ಈತನಿಗೆ ಮನೆ, ಹೆಂಡತಿ , ಕುಟುಂಬ ಎಲ್ಲವೂ ಇದೆ. ಆದರೆ ಮನೆಗೆ ಹೋದರೆ ನನಗೆ ಸ್ವಾತಂತ್ರವಿಲ್ಲ. ಮನೆಗೆ ಬರಬೇಕಿದ್ದರೆ ಸಿಗರೇಟು ಮತ್ತು ಕುಡಿತ ಬಿಡಬೇಕು ಎಂಬ ಷರತ್ತು ಇದೆ. ಹಾಗೆ ಮಾಡಿದರೆ ನನಗೆ ಬರುತ್ತಿರುವ ಪೆನ್ಷನ್ ಅವರಿಗೆ ಕೊಡಬೇಕಾಗುತ್ತದೆ. ಅದರ ಬದಲು, ಇಲ್ಲಿ ನನಗೆ ಇಷ್ಟಬಂದಂತೆ ಇರಬಹುದು ಎಂದು ಈತ ಹೇಳುತ್ತಾನೆ.
2017ರಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಪೊಲೀಸರ ನೆರವು ಪಡೆದು ಈತನನ್ನು ಎಳೆದುಕೊಂಡು ಹೋಗಿ 20 ಕಿ.ಮೀ ದೂರದ ಮನೆಗೆ ಬಿಟ್ಟುಬಂದಿದ್ದರು. ಆದರೆ ಕೆಲವೇ ದಿನಗಳಲ್ಲಿ ಈತ ಮತ್ತೆ ವಿಮಾನ ನಿಲ್ದಾಣದ 2ನೇ ಟರ್ಮಿನಲ್ನ ತನ್ನ ನೆಲೆಗೆ ಮರಳಿದ್ದಾನೆ. ಮನೆಯಲ್ಲಿ ಅವಮಾನ ಎದುರಿಸಲಾಗದೆ ಮತ್ತೆ ಮೊದಲಿನ ಜಾಗಕ್ಕೆ ಬಂದಿದ್ದೇನೆ. ಇಲ್ಲಿ ಕನಿಷ್ಟ ಇಷ್ಟಬಂದಂತೆ ಬದುಕುವ ಅವಕಾಶವಾದರೂ ಇದೆ ಎಂಬುದು ಜಿಯಾಂಗ್ನ ಅಭಿಪ್ರಾಯವಾಗಿದೆ.