"ಭಾರತದ ಮೇಲೆ ಅಷ್ಟೊಂದು ಪ್ರೀತಿಯಿದ್ದರೆ ಅಲ್ಲಿಗೇ ಹೋಗಿ ಬಿಡಿ": ಇಮ್ರಾನ್ ಖಾನ್ಗೆ ಮರಿಯಂ ನವಾಝ್ ಹೇಳಿಕೆ
PHOTO:TWITTER
ಇಸ್ಲಾಮಾಬಾದ್: ಭಾರತವನ್ನು ಹಾಡಿ ಹೊಗಳಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಕಿಡಿ ಕಾರಿರುವ ವಿಪಕ್ಷ ನಾಯಕಿ ಮರಿಯಂ ನವಾಝ್, ಅವರಿಗೆ ಭಾರತ ಅಷ್ಟೊಂದು ಇಷ್ಟವಾದಲ್ಲಿ ಅವರು ಅಲ್ಲಿಗೇ ಹೋಗಲಿ ಎಂದಿದ್ದಾರೆ.
"ಭಾರತ ಬಹಳಷ್ಟು ಆತ್ಮಗೌರವವಿರುವ ದೇಶ" ಎಂದು ಇಮ್ರಾನ್ ಖಾನ್ ಹೇಳಿದ ನಂತರ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಝ್ ಉಪಾಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ನವಾಝ್ ಷರೀಫ್ ಪುತ್ರಿ ಮರಿಯಂ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಶುಕ್ರವಾರ ದೇಶವನ್ನುದ್ದೇಶಿಸಿ ಮಾತನಾಡುವ ವೇಳೆ ಇಮ್ರಾನ್ ಖಾನ್, ತಾವು ಭಾರತದ ವಿರುದ್ಧವಲ್ಲ ಹಾಗೂ ತಮಗೆ ಅಲ್ಲಿ ಬಹಳಷ್ಟು ಅಭಿಮಾನಿಗಳಿದ್ದಾರೆ ಎಂದಿದ್ದರು. "ಭಾರತದ ಹಿತಾಸಕ್ತಿಯ ವಿರುದ್ಧ ಆ ದೇಶ ಕಾರ್ಯಾಚರಿಸಲು ಯಾವುದೇ ಇತರ ದೇಶ ಅದರ ಮೇಲೆ ಒತ್ತಡ ಹೇರುವ ಹಾಗಿಲ್ಲ, ನಿರ್ಬಂಧಗಳ ಹೊರತಾಗಿಯೂ ಅವರು ರಷ್ಯಾದಿಂದ ತೈಲ ಖರೀದಿಸುತ್ತಿದ್ದಾರೆ. ಯುರೋಪಿಯನ್ ಯೂನಿಯನ್ ರಾಯಭಾರಿಗಳು ಇಲ್ಲಿ ಹೇಳಿದ್ದನ್ನೇ ಭಾರತದಲ್ಲೂ ಹೇಳಬಹುದೇ?" ಎಂದು ಇಮ್ರಾನ್ ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಮರಿಯಂ, "ಅವರಿಗೆ ತಲೆ ಕೆಟ್ಟಿದೆ. ನಿಮಗೆ ಭಾರತ ಅಷ್ಟೊಂದು ಇಷ್ಟವಾದರೆ ಅಲ್ಲಿಗೇ ಸ್ಥಳಾಂತರಗೊಳ್ಳಿ ಮತ್ತು ಪಾಕಿಸ್ತಾನದ ಜೀವನ ತೊರೆಯಿರಿ" ಎಂದು ಹೇಳುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.