ಈ ವರ್ಷ ವಿಶ್ವದ ಅತೀ ಶ್ರೀಮಂತರಿಗೆ 1.4 ಟ್ರಿಲಿಯನ್ ಡಾಲರ್ ನಷ್ಟ : ವರದಿ
Getty Images
ವಾಷಿಂಗ್ಟನ್, ಜೂ.14: ಹಣದುಬ್ಬರದ ಆತಂಕ ಹಾಗೂ ಅತ್ಯಧಿಕ ಬಡ್ಡಿದರದ ಹೊರೆಯಿಂದ ಜಾಗತಿಕ ಆರ್ಥಿಕ ಮಾರುಕಟ್ಟೆ ನಲುಗಿದ ಹಿನ್ನಲೆಯಲ್ಲಿ ಈ ವರ್ಷ ವಿಶ್ವದ 500 ಅತೀ ಶ್ರೀಮಂತರು ಒಟ್ಟು 1.4 ಟ್ರಿಲಿಯನ್ ಡಾಲರ್(ಸುಮಾರು 1.4 ಲಕ್ಷ ಕೋಟಿ ರೂ.) ನಷ್ಟ ಅನುಭವಿಸಿದ್ದಾರೆ ಎಂದು ಬ್ಲೂಮ್ಬರ್ಗ್ ಬಿಲಿಯನೇರ್ ಇಂಡೆಕ್ಸ್ ವರದಿ ಮಾಡಿದೆ.
ಕಳೆದ ದಶಕದಲ್ಲಿ ಶ್ರೀಮಂತ ವ್ಯಕ್ತಿಗಳ ಸಂಪತ್ತು ಹೆಚ್ಚಳ ವಿಭಾಗದಲ್ಲಿ ಪ್ರಾಬಲ್ಯ ಸಾಧಿಸಿದ್ದ ಏಶ್ಯಾ-ಪೆಸಿಫಿಕ್ ವಲಯದ ಶ್ರೀಮಂತರ ಶ್ರೇಯಾಂಕದಲ್ಲಿ ಕೇವಲ 4.2% ಹೆಚ್ಚಳವಾಗಿರುವುದನ್ನು ಅಂಕಿಅಂಶ ಸಾಬೀತುಪಡಿಸಿದೆ. ಐಟಿ ಸಂಸ್ಥೆಗಳ ವಿರುದ್ಧದ ಚೀನಾದ ಬಿಗಿ ನಿಲುವು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದ ಕುಸಿತ ಇದಕ್ಕೆ ಕಾರಣವಾಗಿರಬಹುದು. ಆದರೆ ಇದು ಅಮೆರಿಕದ ಸ್ಟಾಕ್ ಮಾರುಕಟ್ಟೆಯಲ್ಲಿ ಭಾರೀ ಲಾಭಕ್ಕೆ ಕಾರಣವಾಗಿದೆ. ಇದರಿಂದ ಕ್ರಿಪ್ಟೊಕರೆನ್ಸಿಯಿಂದ ಆಸ್ತಿಯ ಮೌಲ್ಯದವರೆಗೆ ಎಲ್ಲದರ ಬೆಲೆಯಲ್ಲಿಯೂ ಹೆಚ್ಚಳವಾಗಿದೆ. ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿದರ ಹೆಚ್ಚಳದಂತಹ ಕ್ರಮ ಅನಿವಾರ್ಯವಾಗಿದೆ ಎಂದು ವರದಿ ಹೇಳಿದೆ.
ಜಗತ್ತಿನ ಅತ್ಯಧಿಕ ಶ್ರೀಮಂತರು ಇರುವ ದೇಶಗಳ ಪಟ್ಟಿಯಲ್ಲಿ ಅಮೆರಿಕ, ಜಪಾನ್, ಚೀನಾ, ಜರ್ಮನಿ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದು ಈ 4 ದೇಶಗಳು ವಿಶ್ವದ ಒಟ್ಟು ವೈಯಕ್ತಿಕ ಮೌಲ್ಯದ 64% ರಷ್ಟು ನಿವ್ವಳ ಮೌಲ್ಯದ ಶ್ರೀಮಂತರನ್ನು ಹೊಂದಿವೆ. ವಿಶ್ವದಲ್ಲಿ 30 ಮಿಲಿಯನ್ ಡಾಲರ್ ಅಥವಾ ಅದಕ್ಕೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಬಲ್ಲ ಜನರ ಸಂಪತ್ತು 9.6%ದಷ್ಟು ಏರಿಕೆಯಾಗಿದೆ. 1 ಮಿಲಿಯನ್ ಡಾಲರ್ನಿಂದ 5 ಮಿಲಿಯನ್ ಡಾಲರ್ನಷ್ಟು ಬಂಡವಾಳ ಹೂಡಬಲ್ಲವರ ಸಂಪತ್ತಿನಲ್ಲಿ 7.8% ಹೆಚ್ಚಳವಾಗಿದೆ. ಟೆಕ್ ಸಂಸ್ಥೆಗಳು ಹಾಗೂ , ಕ್ರಿಪ್ಟೊ ಕ್ಷೇತ್ರ ಸೇರಿದಂತೆ ನವೋದ್ಯಮಗಳು ಮುಂದಿನ ದಿನಗಳಲ್ಲಿ ಇನ್ನಷ್ಟು ಯುವ ಮತ್ತು ಶ್ರೀಮಂತ ವ್ಯಕ್ತಿಗಳ ಉಗಮಕ್ಕೆ ಕಾರಣವಾಗಲಿದೆ ಎಂದು ವರದಿ ಹೇಳಿದೆ.