ಇಂಟರ್ನೆಟ್ ಸ್ಥಗಿತದಿಂದ ಆರ್ಥಿಕತೆಗೆ 10 ಬಿಲಿಯನ್ ಡಾಲರ್ ವೆಚ್ಚ: ವರದಿ
ನ್ಯೂಯಾರ್ಕ್, ಜು.7: ಜಗತ್ತಿನ ವಿವಿಧೆಡೆ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯು ಜಾಗತಿಕ ಆರ್ಥಿಕತೆಗೆ 10 ಬಿಲಿಯನ್ ಡಾಲರ್ನಷ್ಟು ವೆಚ್ಚದ ಹೊರೆ ಹೊರಿಸಿದ್ದು ಇದು 2021ರ ವೆಚ್ಚಕ್ಕಿಂತ ದುಪ್ಪಟ್ಟಾಗಿದೆ ಎಂದು ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ. 2021ರ ಇಡೀ ವರ್ಷಕ್ಕೆ ಹೋಲಿಸಿದರೆ 2022ರ ಇದುವರೆಗಿನ 6 ತಿಂಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸುವಿಕೆಯ ವೆಚ್ಚದ ಹೊರೆ ಅಧಿಕವಾಗಿದೆ ಎಂದು ಮಂಗಳವಾರ ಬಿಡುಗಡೆ ಮಾಡಿರುವ ಟಾಪ್10ವಿಪಿಎನ್ ವರದಿ ಹೇಳಿದೆ.
16 ದೇಶಗಳಲ್ಲಿ ಆಗಿರುವ ಪ್ರಮುಖ ಸ್ಥಗಿತದಿಂದ 10.6 ಬಿಲಿಯನ್ ಡಾಲರ್ ವೆಚ್ಚವಾಗಿದೆ ಎಂದು ವರದಿ ಹೇಳಿದೆ. ಇಂಟರ್ನೆಟ್ ತಾತ್ಕಾಲಿಕ ಸ್ಥಗಿತ, ಸಾಮಾಜಿಕ ಮಾಧ್ಯಮ ಸ್ಥಗಿತ ಹಾಗೂ ಮೊಬೈಲ್ ಕರೆಯ ಮೂಲಕ ಧ್ವನಿ ಕರೆ ಮತ್ತು ಪಠ್ಯ ಸಂದೇಶ ಮಾತ್ರ ರವಾನಿಸಲು ಸಾಧ್ಯವಾಗುವಂತೆ ಇಂಟರ್ನೆಟ್ ವೇಗವನ್ನು ನಿಯಂತ್ರಿಸುವುದು- ಈ ಮೂರು ರೀತಿಯ ಸ್ಥಗಿತವನ್ನು ವರದಿಯಲ್ಲಿ ಪಟ್ಟಿ ಮಾಡಲಾಗಿದೆ.
10.6 ಬಿಲಿಯನ್ ಡಾಲರ್ ವೆಚ್ಚದ ಹೊರೆಯಲ್ಲಿ ರಶ್ಯದ ಪಾಲು 8.7 ಬಿಲಿಯನ್ ಡಾಲರ್ ಆಗಿದ್ದು ಅತ್ಯಧಿಕ ಇಂಟರ್ನೆಟ್ ಸ್ಥಗಿತಗೊಂಡ ದೇಶಗಳ ಪಟ್ಟಿಯಲ್ಲಿದೆ. ಉಕ್ರೇನ್ ಮೇಲಿನ ಆಕ್ರಮಣದ ಬಳಿಕ , ದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ರಶ್ಯದಲ್ಲಿ ಹಲವು ಬಾರಿ ಇಂಟರ್ನೆಟ್ ಸ್ಥಗಿತ ಮಾಡಲಾಗಿದೆ.
ಇದೇ ರೀತಿ, ಸುಡಾನ್, ಸಿರಿಯಾ ಮತ್ತು ಅಲ್ಜೀರಿಯಾದ ಸರಕಾರಗಳೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ಎಸಗುವುದನ್ನು ತಪ್ಪಿಸಲು ಇಂಟರ್ನೆಟ್ ಸ್ಥಗಿತಗೊಳಿಸಿವೆ. ಪ್ರಾದೇಶಿಕ ಸ್ಥಗಿತದ ವೆಚ್ಚವನ್ನು ರಾಷ್ಟ್ರೀಯ ಜಿಡಿಪಿಯ ಅನುಪಾತವಾಗಿ ಪ್ರದೇಶದ ಆರ್ಥಿಕ ಉತ್ಪಾದನೆಯಿಂದ ಪಡೆಯಲಾಗಿದೆ ಎಂದು ವರದಿ ಹೇಳಿದೆ.