ಕ್ಷಿಪ್ರಕ್ರಾಂತಿ ವಿರೋಧಿಗಳು ಇನ್ನಷ್ಟು ಗಲ್ಲುಶಿಕ್ಷೆಗೆ ಅರ್ಹರು: ಮ್ಯಾನ್ಮಾರ್ ಸೇನಾಡಳಿತ
ಯಾಂಗ್ಯಾನ್, ಜು.26: ಗಲ್ಲಿಗೇರಿಸಲ್ಪಟ್ಟ 4 ರಾಜಕೀಯ ಕೈದಿಗಳು ಎಸಗಿರುವ ಅಪರಾಧದ ಗಂಭೀರತೆಯನ್ನು ಗಮನಿಸಿದರೆ ಅವರು ಇನ್ನಷ್ಟು ಮರಣದಂಡನೆ ಶಿಕ್ಷೆಗೆ ಅರ್ಹರಾಗಿದ್ದಾರೆ ಎಂದು ಮ್ಯಾನ್ಮಾರ್ನ ಸೇನಾಡಳಿತದ ವಕ್ತಾರರು ಮಂಗಳವಾರ ಹೇಳಿದ್ದಾರೆ. ಇತರ ಮರಣದಂಡನೆ ಪ್ರಕರಣಗಳೊಂದಿಗೆ ಹೋಲಿಸಿದರೆ ಈ ಕಾರ್ಯಕರ್ತರು ಎಸಗಿರುವ ಅಪರಾಧಕ್ಕೆ ಅವರಿಗೆ ಹಲವು ಬಾರಿ ಮರಣದಂಡನೆ ವಿಧಿಸಬೇಕು ಎಂದು ಸೇನಾಡಳಿತದ ವಕ್ತಾರ ಜಾವೊ ಮಿನ್ಟುನ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಪ್ರತಿವಾದಿಗಳಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಸಾಕಷ್ಟು ಅವಕಾಶ ಒದಗಿಸಲಾಗಿದೆ. ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಕುಟುಂಬದ ಸದಸ್ಯರನ್ನು ಭೇಟಿಯಾಗಲು ಅವಕಾಶ ಒದಗಿಸಲಾಗಿದೆ. ಇವರು ಹಲವು ಅಮಾಯಕ ಜನರಿಗೆ ತೊಂದರೆ ನೀಡಿದ್ದು, ಇವರಿಂದ ಆಗಿರುವ ಹಲವು ನಷ್ಟಗಳನ್ನು ಭರಿಸಲು ಸಾಧ್ಯವಿಲ್ಲ ಎಂದವರು ಹೇಳಿದ್ದಾರೆ. ಕ್ಷಿಪ್ರಕ್ರಾಂತಿಯನ್ನು ವಿರೋಧಿಸಿದ 4 ಹೋರಾಟಗಾರರನ್ನು ಮ್ಯಾನ್ಮಾರ್ನ ಸೇನಾಡಳಿತ ಸೋಮವಾರ ಗಲ್ಲಿಗೇರಿಸಿದ್ದು ಇದು ವ್ಯಾಪಕ ಖಂಡನೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಮ್ಯಾನ್ಮಾರ್ನಲ್ಲಿ ಈ ರೀತಿಯ ಇನ್ನಷ್ಟು ಘಟನೆಗಳು ನಡೆಯುವ ಸಾಧ್ಯತೆ ಇರುವುದರಿಂದ ಅಂತರಾಷ್ಟ್ರೀಯ ಸಮುದಾಯ ತಕ್ಷಣ ಮಧ್ಯಪ್ರವೇಶಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.





