ಮ್ಯೂಸಿಕ್ ವೀಡಿಯೊ ಶೂಟಿಂಗ್ ವೇಳೆ ಎಂಟು ಮಾಡೆಲ್ಗಳ ಮೇಲೆ ಅತ್ಯಾಚಾರ
ಜೋಹಾನ್ಸ್ಬರ್ಗ್: ಮ್ಯೂಸಿಕ್ ವೀಡಿಯೊ ಶೂಟಿಂಗ್ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಬಂದೂಕುಧಾರಿಗಳ ತಂಡವೊಂದು ಎಂಟು ಮಂದಿ ಯುವತಿಯರ ಮೇಲೆ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.
ಜೋಹಾನ್ಸ್ಬರ್ಗ್ ನ ಪುಟ್ಟ ಪಟ್ಟಣವಾದ ಕ್ರುಗೇರ್ಸ್ಡ್ರಾಪ್ ಹೊರವಲಯದಲ್ಲಿ ಗುರುವಾರ ಯುವ ಮಾಡೆಲ್ಗಳ ಮೇಲೆ ನಡೆದ ಅತ್ಯಾಚಾರಕ್ಕೆ ಸಂಬಂಧಿಸಿದಂತೆ 20 ಮಂದಿ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಪೊಲೀಸ್ ಖಾತೆ ಸಚಿವ ಭೇಕಿ ಸೆಲ್ ಹೇಳಿದ್ದಾರೆ.
ಶೂಟಿಂಗ್ ನಡೆಸಲು ಆಗಮಿಸಿದ್ದ ಸಿಬ್ಬಂದಿ ಮತ್ತು ನಟರು ಸಾಧನ ಸಲಕರಣೆಗಳನ್ನು ಅನ್ಲೋಡ್ ಮಾಡುತ್ತಿದ್ದಾಗ ಅವರ ಮೇಲೆ ಈ ಗ್ಯಾಂಗ್ ದಾಳಿ ನಡೆಸಿದೆ ಎಂದು ಸಚಿವರು ಹೇಳಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಯುವತಿಯರು 18 ರಿಂದ 35 ವರ್ಷ ವಯಸ್ಸಿನವರು ಎನ್ನಲಾಗಿದೆ. ಒಬ್ಬಾಕೆಯ ಮೇಲೆ 10 ಮಂದಿ ಅತ್ಯಾಚಾರ ಎಸಗಿದ್ದು, ಮತ್ತೊಬ್ಬ ಮಾಡೆಲ್ನ ಮೇಲೆ 8 ಮಂದಿ ಅತ್ಯಾಚಾರ ಎಸಗಿದ್ದಾರೆ ಎಂದು ವಿವರಿಸಿದ್ದಾರೆ.
ದಾಳಿಕೋರರು ಮಾಡೆಲ್ಗಳನ್ನು ಬಟ್ಟೆಬಿಚ್ಚಿ ನಗ್ನಗೊಳಿಸಿದ್ದಲ್ಲದೇ, ಅವರ ವಸ್ತುಗಳನ್ನೂ ದೋಚಿದ್ದಾರೆ. ಅವರು ವಿದೇಶಿಯರಂತೆ ಕಾಣುತ್ತಿದ್ದರು. ಅವರು ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ ಝಾಮಾ ಝಮಾಗಳು ಎಂದು ತಿಳಿಸಿದ್ದಾರೆ.
ತಪ್ಪಿತಸ್ಥರನ್ನು ತಕ್ಷಣ ಬಂಧಿಸಿ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಸೂಚಿಸಲಾಗಿದೆ ಎಂದು ಅಧ್ಯಕ್ಷ ಸಿರಿಲ್ ರಮಫೋಸಾ ಹೇಳಿದ್ದಾರೆ.