ʼಮಧ್ಯ ವಯಸ್ಕನಾದ ಸೂರ್ಯʼ: ಇಎಸ್ಎ ಅಧ್ಯಯನ ವರದಿಯಲ್ಲಿ ಉಲ್ಲೇಖ
ಸಾಂದರ್ಭಿಕ ಚಿತ್ರ
ಪ್ಯಾರಿಸ್, ಆ.16: ಸೂರ್ಯನಿಗೆ ಸುಮಾರು 4.57 ಬಿಲಿಯನ್ ವರ್ಷಗಳಾಗಿರಬಹುದು ಎಂದು ಅಂದಾಜಿಸಲಾಗಿದ್ದು ಸೂರ್ಯ ತನ್ನ ಮಧ್ಯವಯಸ್ಸನ್ನು ತಲುಪಿದ್ದಾನೆ ಎಂದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ(ಇಎಸ್ಎ) ಇತ್ತೀಚೆಗೆ ನಡೆಸಿದ ಸಂಶೋಧನೆಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಆಗಾಗ ಸಂಭವಿಸುವ ಸೌರಜ್ವಾಲೆಗಳು, ಸೌರ ಬಿರುಗಾಳಿ ಮುಂತಾದವನ್ನು ಗಮನಿಸಿದರೆ ಸೂರ್ಯ ಮಧ್ಯವಯಸ್ಸಿನ ಬಿಕ್ಕಟ್ಟಿನ ಸಮಸ್ಯೆ ಎದುರಿಸುತ್ತಿರುವಂತೆ ಭಾಸವಾಗುತ್ತಿದೆ ಎಂದು ಅಧ್ಯಯನ ವರದಿ ತಿಳಿಸಿದೆ. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಗಗನನೌಕೆ ಗೈಯಾ ಇತ್ತೀಚೆಗೆ ರವಾನಿಸಿದ ಅಂಕಿಅಂಶವನ್ನು ಪರಿಶೀಲಿಸಿದ ಬಳಿಕ ಈ ಮಾಹಿತಿ ಲಭ್ಯವಾಗಿದೆ.
ಬ್ರಹ್ಮಾಂಡದ ಹಲವು ನಕ್ಷತ್ರಗಳ ಜೀವನಯಾತ್ರೆಯನ್ನು ಗೈಯಾ ಬಾಹ್ಯಾಕಾಶ ನೌಕೆ ಅಧ್ಯಯನ ನಡೆಸುತ್ತಿದೆ. ನೂರಾರು ಮಿಲಿಯನ್ ನಕ್ಷತ್ರಗಳ ಆಂತರಿಕ ಗುಣಲಕ್ಷಣಗಳನ್ನು ಈ ಅಂಕಿಅಂಶ ಒಳಗೊಂಡಿದೆ. ನಕ್ಷತ್ರಗಳ ತಾಪಮಾನ, ಗಾತ್ರ ಮತ್ತು ದ್ರವ್ಯರಾಶಿಯ ಬಗ್ಗೆ ಈ ಅಂಕಿಅಂಶದಲ್ಲಿ ವಿವರವಿದೆ. ಭೂಮಿಯಿಂದ ನೋಡಿದಾಗ ಕಂಡುಬರುವ ನಕ್ಷತ್ರಗಳ ಸ್ಪಷ್ಟ ಹೊಳಪು ಮತ್ತು ಬಣ್ಣದ ಅತ್ಯಂತ ನಿಖರವಾದ ಅಳತೆಯನ್ನು ಗೈಯಾ ನೌಕೆ ಮಾಡುತ್ತದೆ.
ಆ ಮೂಲಭೂತ, ಗಮನಿಸಬಹುದಾದ ಗುಣಗಳನ್ನು ನಕ್ಷತ್ರದ ಆಂತರಿಕ ಗುಣಲಕ್ಷಣವಾಗಿ ಪರಿವರ್ತಿಸಲು ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತದೆ ಎಂದು ವರದಿ ಹೇಳಿದೆ. ಹೈಡ್ರೋಜನ್ ಅನ್ನು ಹೀಲಿಯಂನೊಂದಿಗೆ ಬೆಸೆಯುತ್ತಾ, ಸಾಮಾನ್ಯವಾಗಿ ಸ್ಥಿರವಾಗಿರುತ್ತಾ ಸುಮಾರು 4.57 ಶತಕೋಟಿ ವರ್ಷಗಳೊಂದಿಗೆ ನಮ್ಮ ಸೂರ್ಯ ಇದೀಗ ತನ್ನ ಆರಾಮದಾಯಕ ಮಧ್ಯವಯಸ್ಸಿನಲ್ಲಿದ್ದಾನೆ.
ಸೂರ್ಯನ ಮಧ್ಯಭಾಗದಲ್ಲಿರುವ ಹೈಡ್ರೋಜನ್ ಇಂಧನವು ಸವಕಳಿಯಾಗಿ ಮತ್ತು ಸಮ್ಮಿಳನ ಪ್ರಕ್ರಿಯೆಯಲ್ಲಿ ಬದಲಾವಣೆಗಳು ಸಂಭವಿಸಿದಂತೆ ಮೇಲ್ಮೈ ತಾಪಮಾನವನ್ನು ಕಳೆದುಕೊಳ್ಳುವ ಸೂರ್ಯ ಕ್ರಮೇಣ ದೈತ್ಯ ಕೆಂಪು ನಕ್ಷತ್ರವಾಗಿ ಅಭಿವೃದ್ಧಿ ಹೊಂದಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ. ಇದು ನಕ್ಷತ್ರವು ಹೊಂದಿರುವ ದ್ರವ್ಯರಾಶಿ ಮತ್ತು ಅದರ ರಾಸಾಯನಿಕ ಸಂಯೋಜನೆಯನ್ನು ಅವಲಂಬಿಸಿದೆ ಎಂದು ವರದಿ ಹೇಳಿದೆ.