ಅಮೆರಿಕ-ರಶ್ಯ ಪರಮಾಣು ಯುದ್ಧವಾದರೆ 5 ಶತಕೋಟಿ ಜನ ಸಾಯಬಹುದು: ವರದಿ
photo : NDTV
ನ್ಯೂಯಾರ್ಕ್, ಆ.16: ಅಮೆರಿಕ ಮತ್ತು ರಶ್ಯದ ಮಧ್ಯೆ ಪೂರ್ಣಪ್ರಮಾಣದ ಪರಮಾಣು ಯುದ್ಧವಾದರೆ 5 ಶತಕೋಟಿ ಜನ ಸಾಯಬಹುದು ಎಂದು ನ್ಯೂಜೆರ್ಸಿಯ ರುಟ್ಗರ್ಸ್ ವಿವಿಯ ವಿಜ್ಞಾನಿಗಳ ವರದಿ ಹೇಳಿದೆ. ಆಧುನಿಕ ಪರಮಾಣು ಯುದ್ಧದಲ್ಲಿ ಜಾಗತಿಕ ಕ್ಷಾಮದ ಪ್ರಭಾವದಿಂದ 5 ಶತಕೋಟಿ ಜನರು ಸಾವನ್ನಪ್ಪುತ್ತಾರೆ.
ಇದು ಮಾರಣಾಂತಿಕ ಸ್ಫೋಟಗಳಿಂದ ಸಂಭವಿಸುವ ಸಾವುನೋವುಗಳನ್ನು ಮೀರಿಸಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ವಿಜ್ಞಾನಿಗಳ ತಂಡ 6 ಸಂಭಾವ್ಯ ಪರಮಾಣು ಸಂಘರ್ಷದ ಸನ್ನಿವೇಶಗಳ ಪರಿಣಾಮವನ್ನು ಗುರುತಿಸಿದೆ. ಅಮೆರಿಕ-ರಶ್ಯ ನಡುವಿನ ಪೂರ್ಣಪ್ರಮಾಣದ ಪರಮಾಣು ಯುದ್ಧವು ಮನುಕುಲದ ಅರ್ಧದಷ್ಟನ್ನು ನಾಶಗೊಳಿಸಬಹುದು ಎಂದು ‘ನೇಚರ್ ಫುಡ್’ ಪತ್ರಿಕೆಯಲ್ಲಿ ಪ್ರಕಟವಾದ ವರದಿ ಉಲ್ಲೇಖಿಸಿದೆ.
ಪರಮಾಣು ಶಸ್ತ್ರಾಸ್ತ್ರಗಳ ಸ್ಫೋಟದಿಂದ ಉರಿಯುವ ಬೆಂಕಿಯಿಂದ ಎಷ್ಟು ಪ್ರಮಾಣದ ಮಸಿ ವಾತಾವರಣಕ್ಕೆ ಸೇರಿಕೊಳ್ಳುತ್ತದೆ ಎಂಬ ಲೆಕ್ಕಾಚಾರದ ಮೇಲೆ ಈ ಅಂದಾಜು ಮಾಡಲಾಗಿದೆ. ಸಣ್ಣ ಪ್ರಮಾಣದ ಸಂಘರ್ಷವೂ ಜಾಗತಿಕ ಆಹಾರ ಉತ್ಪಾದನೆಯ ಮೇಲೆ ವಿನಾಶಕಾರಿ ಪರಿಣಾಮ ಬೀರಬಹುದು.
ಭಾರತ ಮತ್ತು ಪಾಕಿಸ್ತಾನದ ನಡುವಿನ ಸ್ಥಳೀಯ ಯುದ್ಧವು 5 ವರ್ಷದೊಳಗೆ ಬೆಳೆ ಇಳುವರಿಯಲ್ಲಿ ಸುಮಾರು 7% ಕುಸಿತಕ್ಕೆ ಕಾರಣವಾಗಬಹುದು. ಆದರೆ ಅಮೆರಿಕ-ರಶ್ಯ ಯುದ್ಧವು 3ರಿಂದ 4 ವರ್ಷದಲ್ಲೇ ಆಹಾರ ಉತ್ಪಾದನೆಯಲ್ಲಿ 90%ದಷ್ಟು ಕುಸಿತಕ್ಕೆ ಕಾರಣವಾಗಬಹುದು. ಪ್ರಸ್ತುತ ಪಶು ಆಹಾರವಾಗಿ ಬಳಸುವ ಬೆಳೆಯನ್ನು ಬಳಸುವುದು ಅಥವಾ ಆಹಾರ ತ್ಯಾಜ್ಯವನ್ನು ಕಡಿಮೆ ಮಾಡುವುದರಿಂದ ಸಂಘರ್ಷದ ನಂತರದ ಸಮಸ್ಯೆಗೆ ತುಸು ಪರಿಹಾರ ಒದಗಿಸಬಹುದೇ ಎಂಬ ಬಗ್ಗೆಯೂ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.
ಪರಮಾಣು ಯುದ್ಧ ಸಂಭವಿಸದಂತೆ ನಾವು ತಡೆಯಬೇಕು ಎಂಬ ಒಂದು ವಿಷಯವನ್ನು ಈ ಅಂಕಿ ಅಂಶ ನಮಗೆ ತಿಳಿಸುತ್ತದೆ ಎಂದು ವಿವಿಯ ಪರಿಸರ ವಿಜ್ಞಾನ ವಿಭಾಗದ ಪ್ರೊಫೆಸರ್ ಅಲಾನ್ ರೊಬೊಕ್ ಹೇಳಿದ್ದಾರೆ.