ಸೂರ್ಯನ 145 ಮೆಗಾಪಿಕ್ಸೆಲ್ ನ ಅದ್ಭುತ ಚಿತ್ರ ಸೆರೆ

photo : NDTV
ವಾಷಿಂಗ್ಟನ್, ಆ.20: ವಿಶೇಷವಾಗಿ ವಿನ್ಯಾಸಗೊಳಿಸಿದ ದೂರದರ್ಶಕದಿಂದ ಸೆರೆಹಿಡಿಯಲಾದ ಸೂರ್ಯನ ಸ್ಫಟಿಕ ಸ್ಷಷ್ಟ 145 ಮೆಗಾಪಿಕ್ಸೆಲ್ ಅದ್ಭುತ ಚಿತ್ರವನ್ನು ರೆಡಿಟ್ ವೆಬ್ಸೈಟ್ ಬಳಕೆದಾರರೊಬ್ಬರು ಹಂಚಿಕೊಂಡಿದ್ದು ಈ ಚಿತ್ರ ವೈರಲ್ ಆಗಿದೆ. ಈ ಆಕರ್ಷಕ ಚಿತ್ರವನ್ನು ಸಬ್-ರೆಡಿಟ್ ಪಿಕ್ಸ್ನಲ್ಲಿ ಅಜಮೆಸ್ಮಕಾರ್ಥಿ ಎಂಬ ಹೆಸರಿನ ಬಳಕೆದಾರರು ಹಂಚಿಕೊಂಡಿದ್ದು ‘ ವಿಶೇಷವಾಗಿ ವಿನ್ಯಾಸಗೊಳಿಸಿರುವ ದೂರದರ್ಶಕ ಬಳಸಿ ನಮ್ಮ ಸೂರ್ಯನ 145 ಮೆಕಾಪಿಕ್ಸೆಲ್ ಚಿತ್ರವನ್ನು ಸೆರೆಹಿಡಿದಿದ್ದೇನೆ. ಇದನ್ನು ಝೂಮ್ ಮಾಡಿ’ ಎಂದು ಬರೆದಿದ್ದಾರೆ.
ಶೇರ್ ಮಾಡಿಕೊಂಡ ಕೆಲವೇ ಗಂಟೆಗಳಲ್ಲಿ 36,000ಕ್ಕೂ ಅಧಿಕ ಲೈಕ್ ಹಾಗೂ ವ್ಯಾಪಕ ಕಮೆಂಟ್ಸ್ ಪಡೆದಿರುವ ಈ ಚಿತ್ರದ ಶ್ರೇಷ್ಟ ಗುಣಮಟ್ಟದ ಬಗ್ಗೆ ನೆಟ್ಟಿಗರು ವಿಸ್ಮಯ ವ್ಯಕ್ತಪಡಿಸಿದ್ದಾರೆ. ‘ಚಿತ್ರದ ಅದ್ಭುತ ಗುಣಮಟ್ಟ ಗಮನಿಸಿದರೆ ನೀವು ನಾಸಾ(ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಅಥವಾ ಇಂತಹ ಇತರ ಸಂಸ್ಥೆಗಳಲ್ಲಿ ವಿಜ್ಞಾನಿಗಳೊಂದಿಗೆ ಕೆಲಸ ಮಾಡುತ್ತಿರಬೇಕು. ನಿಮ್ಮ ಗುರುತನ್ನು ದಯವಿಟ್ಟು ಬಹಿರಂಗಪಡಿಸಿ’ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ನಕಲಿಯೇ ಎಂದು ದೃಢಪಡಿಸಿಕೊಂಡು ಮುಂದುವರಿದೆ ಎಂದು ಮತ್ತೊಬ್ಬ ಬಳಕೆದಾರ ಪ್ರಶಂಸಿಸಿದ್ದಾರೆ.







