ರಶ್ಯ: ದೇಶದ್ರೋಹ ಆರೋಪ ಮಾಜಿ ಪತ್ರಕರ್ತನಿಗೆ ೨೨ ವರ್ಷ ಜೈಲುಶಿಕ್ಷೆ
ಮಾಸ್ಕೊ, ಸೆ.೬: ಸರಕಾರದ ರಹಸ್ಯ ಮಾಹಿತಿಗಳನ್ನು ಬಹಿರಂಗಪಡಿಸಿದ ಅಪರಾಧಕ್ಕಾಗಿ ಮಾಜಿ ಪತ್ರಕರ್ತನಿಗೆ ರಶ್ಯದ ನ್ಯಾಯಾಲಯ ೨೨ ವರ್ಷ ಜೈಲುಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ರಶ್ಯದ ಕೊಮರ್ಸ್ಯಾಂಟ್ ಮತ್ತು ವೆಡೊಮೊಸ್ಟಿ ದಿನಪತ್ರಿಕೆಯ ಮಾಜಿ ವರದಿಗಾರ, ಆ ಬಳಿಕ ರಶ್ಯದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಲಹೆಗಾರನಾಗಿ ಕಾರ್ಯನಿರ್ವಹಿಸಿದ್ದ ಇವಾನ್ ಸಫ್ರೊನೋವ್ರನ್ನು ವರ್ಗೀಕೃತ ಮಾಹಿತಿಗಳನ್ನು ಬಹಿರಂಗಗೊಳಿಸಿದ ಆರೋಪದಲ್ಲಿ ೨೦೨೦ರಲ್ಲಿ ಬಂಧಿಸಲಾಗಿತ್ತು. ಮಧ್ಯಪ್ರಾಚ್ಯದಲ್ಲಿ ರಶ್ಯದ ಶಸ್ತಾçಸ್ತç ಮಾರಾಟ ಒಪ್ಪಂದದ ರಹಸ್ಯವನ್ನು ಜೆಕ್ ಗಣರಾಜ್ಯದ ವಿದೇಶಿ ಗುಪ್ತಚರ ವಿಭಾಗಕ್ಕೆ ಒದಗಿಸಿದ ಆರೋಪ ಇದಾಗಿದೆ. ಆದರೆ , ಮಾಧ್ಯಮಗಳಲ್ಲಿ ಸರಕಾರವೇ ಬಹಿರಂಗಪಡಿಸಿದ್ದ ಮಾಹಿತಿಯನ್ನು ತಾನು ಜೆಕ್ ಗಣರಾಜ್ಯಕ್ಕೆ ಒದಗಿಸಿದ್ದೆ. ಅವು ರಹಸ್ಯ ಮಾಹಿತಿಗಳಲ್ಲ ಎಂದು ಸಫ್ರೊನೊವ್ ವಾದಿಸಿದ್ದರು.
ಕಳೆದ ತಿಂಗಳು ಸರಕಾರ ಮುಂದಿರಿಸಿದ್ದ `೧೨ ವರ್ಷಗಳ ಜೈಲುಶಿಕ್ಷೆಯನ್ನು ಅನುಭವಿಸುವ ಮನವಿ ಒಪ್ಪಂದ'ವನ್ನು ಸಫ್ರೊನೊವ್ ನಿರಾಕರಿಸಿದ್ದರು. ಇವಾನ್ ಯಾರಿಗೂ ರಹಸ್ಯ ಮಾಹಿತಿ ರವಾನಿಸಿಲ್ಲ. ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ಎಲ್ಲಾ ಪ್ರಾಸಿಕ್ಯೂಷನ್ ಪುರಾವೆಗಳು ಅವರು ಕ್ರಿಮಿನಲ್ ಕೃತ್ಯದಲ್ಲಿ ಭಾಗಿಯಾಗಿಲ್ಲ ಎಂಬುದನ್ನು ದೃಢಪಡಿಸಿದೆ. ಅವರೊಬ್ಬ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸಾಮಾನ್ಯ ಪತ್ರಕರ್ತನಾಗಿದ್ದರು. ಈಗ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಇವಾನ್ ಸಫ್ರೊನೋವ್ರ ವಕೀಲರು ಹೇಳಿದ್ದಾರೆ.
ರಶ್ಯವು ಫೈಟರ್ ಜೆಟ್ ವಿಮಾನವನ್ನು ಈಜಿಪ್ಟ್ಗೆ ಮಾರಾಟ ಮಾಡುವ ೨ ಶತಕೋಟಿ ಡಾಲರ್ ಮೊತ್ತದ ಒಪ್ಪಂದವನ್ನು ಮಾಡಿಕೊಂಡಿದೆ ಎಂಬ ವರದಿಯನ್ನು ಸಫ್ರೊನೋವ್ ಪ್ರಕಟಿಸಿದ್ದರು. ರಶ್ಯದಿಂದ ಜೆಟ್ ವಿಮಾನ ಖರೀದಿಸಿದರೆ ನಿರ್ಬಂಧ ಹೇರುವುದಾಗಿ ಅಮೆರಿಕ ಎಚ್ಚರಿಕೆ ನೀಡಿದ ಬಳಿಕ ಈಜಿಪ್ಟ್ ಈ ಒಪ್ಪಂದದಿAದ ಹಿಂದಕ್ಕೆ ಸರಿದಿತ್ತು. ಈ ಪ್ರಕರಣವು ಸಫ್ರೊನೋವ್ ವಿರುದ್ಧದ ಕಾನೂನು ಪ್ರಕ್ರಿಯೆಯಲ್ಲಿ ಪ್ರಭಾವ ಬೀರಿರಬಹುದು ಎಂದು ಮೂಲಗಳು ಹೇಳಿವೆ.