ಅಟ್ಲಾಂಟ ಕನ್ನಡಿಗರಿಂದ ಸಂಭ್ರಮದ ಕರ್ನಾಟಕ ರಾಜ್ಯೋತ್ಸವದ ಆಚರಣೆ

ಅಟ್ಲಾಂಟ (ಅಮೆರಿಕ): ಅನಿವಾಸಿ ಕನ್ನಡಿಗರ ಹೃದಯವು ತಮ್ಮ ತಾಯ್ನಾಡು ಹಾಗೂ ಮಾತೃಭಾಷೆಗೆ ಸದಾ ಮಿಡಿಯುತ್ತಿರುತ್ತದೆಂಬುದಕ್ಕೆ ನವೆಂಬರ್ 13 ರಂದು ರವಿವಾರ ಅಟ್ಲಾಂಟದಲ್ಲಿ ಅನಿವಾಸಿ ಕನ್ನಡಿಗರಿಂದ ಸಂಭ್ರಮದ ದೀಪಾವಳಿ ಹಾಗೂ ಕರ್ನಾಟಕ ರಾಜ್ಯೋತ್ಸವ ಆಚರಣೆಯೇ ಸಾಕ್ಷಿ.
ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾದ ಕಾರ್ಯಕ್ರಮಗಳು ರಾತ್ರಿ 8 ಗಂಟೆಯವರಿಗೂ ಸುಮಾರು ಒಂದು ಸಾವಿರ ಕನ್ನಡಿಗರು ಸೇರಿ ಸ್ಥಳೀಯ ಕಿರಿಯರ-ಹಿರಿಯರ ಸಾಂಸ್ಕೃತಿಕ ಕಾರ್ಯಕ್ರಮಗಳು, ವೈವಿಧ್ಯಮಯ ಮನರಂಜನೆಗಳು, ಕರ್ನಾಟಕದಿಂದ ಆಗಮಿಸಿದ್ದ ಕಲಾವಿದರಿಂದ ರಸಸಂಜೆ ಹಾಗೂ ಹಬ್ಬದ ಊಟವನ್ನು ಸವಿದು ಆನಂದಿಸಿದರು.
ಬೆಂಗಳೂರಿನಿಂದ ಆಗಮಿಸಿದ್ದ ಮಂಜು ಡ್ರಮ್ಸ್ ಕಲಾವಿದರಾದ ಮಂಜುನಾಥ್, ಗಾಯಕಿ ಐಶ್ವರ್ಯ ರಂಗರಾಜನ್, ಗಾಯಕ ಚಿನ್ಮಯಿ ಅತ್ರೇಯಸ್ ಹಾಗೂ ವರುಣ್ ಪ್ರದೀಪ್ ತಂಡದವರ ಮನರಂಜನೆ ಅಟ್ಲಾಂಟ ಕನ್ನಡಿಗರನ್ನು ಕುಣಿದು ಕುಪ್ಪಳಿಸುವಂತೆ ಮೋಡಿ ಮಾಡಿತು.
ಕಾರ್ಯಕ್ರಮಕ್ಕೆ ಮುಂಚೆ ಅಟ್ಲಾಂಟ ನೃಪತುಂಗ ಕನ್ನಡ ಕೂಟದ ಸ್ಥಾಪಕ ಅಧ್ಯಕ್ಷರಾಗಿ ಈ ಸಂಘವನ್ನು ಕಟ್ಟಿ ಬೆಳೆಸಿದ ಕನ್ನಡಾಭಿಮಾನಿ ಶ್ರೀ. ಹೊನ್ನವಳ್ಳಿ ರಾಮಸ್ವಾಮಿಯವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.
1973ರಲ್ಲಿ ಬೆರಳೆಣಿಕೆಯಷ್ಟು ಕನ್ನಡಿಗರಿಂದ ಸ್ಥಾಪಿತವಾದ ಅಟ್ಲಾಂಟ ನೃಪತುಂಗ ಕನ್ನಡ ಕೂಟ ಇಂದು ಹೆಮ್ಮರವಾಗಿ ಬೆಳೆದು ಜಾರ್ಜಿಯಾ ರಾಜ್ಯದ ಕನ್ನಡಿಗರಿಗೆ ಸಂಪರ್ಕ ಸೇತುವೆಯಾಗಿದೆ. ಅಧ್ಯಕ್ಷ ಶ್ರೀನಿವಾಸ ಪ್ರಸಾದ್ ಹಾಗೂ ಸಂತೋಷ್ ಕೃಷ್ಣಮೂರ್ತಿಯವರ ಸಾರಥ್ಯದಲ್ಲಿ ಮುಂದಿನ ವರ್ಷ ಸುವರ್ಣ ಮಹೋತ್ಸವವನ್ನು ಭರ್ಜರಿಯಾಗಿ ಆಚರಿಸಲು ಅಟ್ಲಾಂಟ ಕನ್ನಡ ಕೂಟವು ತಯಾರಿ ನಡೆಸಿದೆ.








.jpeg)

