ವಿಶ್ವದ ಅತ್ಯಂತ ದುಬಾರಿ ನಗರ ಯಾವುದು ಗೊತ್ತೇ ?
ವಾಷಿಂಗ್ಟನ್, ಡಿ.2: ವಾಸಿಸಲು ಅತ್ಯಂತ ದುಬಾರಿಯಾಗಿರುವ ಜಾಗತಿಕ ನಗರಗಳ ಪಟ್ಟಿಯಲ್ಲಿ ಅಮೆರಿಕದ ನ್ಯೂಯಾರ್ಕ್ (New York)ಹಾಗೂ ಸಿಂಗಾಪುರ(Singapore) ಜಂಟಿಯಾಗಿ ಅಗ್ರಸ್ಥಾನದಲ್ಲಿದೆ ಎಂದು ಇಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್(ಇಐಯು) ಸಮೀಕ್ಷೆಯ ವರದಿ ಹೇಳಿದೆ.
ಉಕ್ರೇನ್ ಯುದ್ಧ ಮತ್ತು ಗಗನಕ್ಕೇರುವ ಇಂಧನ ಬೆಲೆಗಳಿಂದ ಹೆಚ್ಚುತ್ತಿರುವ ಹಣದುಬ್ಬರವು 2022ರಲ್ಲಿ ಬೆಲೆಗಳು 8.1%ದಷ್ಟು ಏರಿಕೆಯಾಗಲು ಕಾರಣವಾಗಿದೆ. ಈ ವರ್ಷ ಸುಮಾರು 172 ದೇಶಗಳು ಹಣದುಬ್ಬರದಿಂದ ಪ್ರಭಾವಿತವಾಗಿದೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಕಳೆದ ವರ್ಷ ಸಿಂಗಾಪುರದ ಜತೆ ಅಗ್ರಸ್ಥಾನದಲ್ಲಿದ್ದ ಇಸ್ರೇಲ್ ನ ಟೆಲ್ ಅವೀವ್ ಈ ವರ್ಷ 3ನೇ ಸ್ಥಾನ ಪಡೆದಿದೆ. ಹಾಂಕಾಂಗ್ ಮತ್ತು ಲಾಸ್ ಏಂಜಲೀಸ್ 4ನೇ ಸ್ಥಾನ, ಜ್ಯೂರಿಚ್ 6, ಜಿನೆವಾ 7, ಸಾನ್ಫ್ರಾನ್ಸಿಸ್ಕೋ 8, ಪ್ಯಾರಿಸ್ 9, ಆಸ್ಷ್ರೇಲಿಯಾದ ಸಿಡ್ನಿ 10ನೇ ಸ್ಥಾನ ಪಡೆದಿದೆ.
2022ರಲ್ಲಿ ಪೆಟ್ರೋಲ್ ಬೆಲೆಗಳು 225ದಷ್ಟು ಏರಿಕೆಯಾಗಿವೆ. ಇಂಧನದ ಜತೆ ಉಪಯುಕ್ತ ಮತ್ತು ಅಗತ್ಯ ವಸ್ತುಗಳು, ವಿದ್ಯುತ್ಶಕ್ತಿಯ ಬೆಲೆಯೂ ಗಗನಕ್ಕೇರಿದೆ. ಉಕ್ರೇನ್ನಲ್ಲಿನ ಯುದ್ಧ, ರಶ್ಯದ ಮೇಲಿನ ಪಾಶ್ಚಿಮಾತ್ಯ ನಿರ್ಬಂಧಗಳು ಮತ್ತು ಚೀನಾದ ಶೂನ್ಯ ಕೋವಿಡ್ ನೀತಿ ಪೂರೈಕೆ ಸರಪಳಿಗೆ ಅಡ್ಡಿಯಾಗಿದೆ. ಇದರ ಜತೆಗೆ ಹೆಚ್ಚುತ್ತಿರುವ ಬಡ್ಡಿದರ ಮತ್ತು ವಿನಿಮಯ ದರದ ಬದಲಾವಣೆ ಸೇರಿಕೊಂಡು ಪ್ರಪಂಚದಾದ್ಯಂತ ಜೀವನ ವೆಚ್ಚದ ಬಿಕ್ಕಟ್ಟಿಗೆ ಕಾರಣವಾಗಿದೆ ಎಂದು ವರದಿ ಹೇಳಿದೆ.