ಅಫ್ಘಾನ್: ವಿವಿ ಪ್ರವೇಶಕ್ಕೆ ನಿಷೇಧ ವಿರೋಧಿಸಿ ಮಹಿಳೆಯರ ಪ್ರತಿಭಟನೆ
ಕಾಬೂಲ್, ಡಿ.22: ವಿಶ್ವವಿದ್ಯಾನಿಲಯಗಳಿಂದ ತಮ್ಮನ್ನು ನಿಷೇಧಿಸುವ ತಾಲಿಬಾನ್ ಆದೇಶದ ವಿರುದ್ಧ ಅಫ್ಘಾನ್(Afghan) ಮಹಿಳೆಯರ ಸಣ್ಣಗುಂಪು ಗುರುವಾರ ಕಾಬೂಲ್(Kabul) ನಲ್ಲಿ ಪ್ರತಿಭಟನೆ ನಡೆಸಿದ್ದು ಕೆಲವರನ್ನು ಬಂಧಿಸಲಾಗಿದೆ ಎಂದು ಕಾರ್ಯಕರ್ತರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.
ಮುಂದಿನ ಸೂಚನೆ ಬರುವವರೆಗೆ , ಎಲ್ಲಾ ಸರಕಾರಿ ಮತ್ತು ಖಾಸಗಿ ವಿವಿಗಳು ಹೆಣ್ಣುಮಕ್ಕಳಿಗೆ ಪ್ರವೇಶ ನಿಷೇಧಿಸುವ ಆದೇಶವನ್ನು ತಕ್ಷಣವೇ ಜಾರಿಗೊಳಿಸಲು ಸೂಚಿಸಲಾಗಿದೆ ಎಂದು ಅಫ್ಘಾನ್ ನ ಉನ್ನತ ಶಿಕ್ಷಣ ಸಚಿವರು ಮಂಗಳವಾರ ಘೋಷಿಸಿದ್ದರು.
ಇದನ್ನು ವಿರೋಧಿಸಿ ಕಾಬೂಲ್ ವಿವಿ ಎದುರು ಪ್ರತಿಭಟನೆ ನಡೆಸಲು ಆರಂಭದಲ್ಲಿ ನಿರ್ಧರಿಸಲಾಗಿತ್ತು. ಆದರೆ ಅಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬಂದಿಯನ್ನು ನಿಯೋಜಿಸಿದ್ದರಿಂದ ಪ್ರತಿಭಟನೆಯನ್ನು ಕಾಬೂಲ್ ನ ಹೊರಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ‘ಅವರು ಮಹಿಳೆಯರನ್ನು ವಿವಿಯಿಂದ ಉಚ್ಛಾಟಿಸಿದ್ದಾರೆ. ಗೌರವಾನ್ವಿತ ಜನರೇ, ನಮ್ಮನ್ನು ಬೆಂಬಲಿಸಿ. ಹಕ್ಕುಗಳು ಎಲ್ಲರಿಗೂ ದೊರಕಲಿ, ಇಲ್ಲದಿದ್ದರೆ ಯಾರಿಗೂ ಬೇಡ’ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿದರು. ಮಹಿಳಾ ಪೊಲೀಸರು ಹಲವು ಹುಡುಗಿಯರನ್ನು ಬಂಧಿಸಿದ್ದು ಬಳಿಕ ಕೆಲವರನ್ನು ಬಿಡುಗಡೆಗೊಳಿಸಿದ್ದಾರೆ ಎಂದು ವರದಿಯಾಗಿದೆ.
ತಾಲಿಬಾನ್ ಅಧಿಕಾರಕ್ಕೆ ಬಂದ ಬಳಿಕ ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ಹೇರಿದೆ. ಹೆಚ್ಚಿನ ಹದಿಹರೆಯದ ಹುಡುಗಿಯರನ್ನು ಮಾಧ್ಯಮಿಕ ಶಾಲೆಯಿಂದ ನಿರ್ಬಂಧಿಸಲಾಗಿದೆ. ಮಹಿಳೆಯರನ್ನು ಅನೇಕ ಸರಕಾರಿ ಉದ್ಯೋಗದಿಂದ ಹೊರಹಾಕಲಾಗಿದೆ, ಪುರುಷ ಸಂಬಂಧಿ ಇಲ್ಲದೆ ಪ್ರಯಾಣಿಸುವುದನ್ನು ತಡೆಯಲಾಗಿದೆ. ಪಾರ್ಕ್ ಅಥವಾ ಉದ್ಯಾನವನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲಾಗಿದೆ.