ಚೀನಾದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಹೆಚ್ಚಳ; 25 ಕೋಟಿ ಮಂದಿಗೆ ಸೋಂಕು!

ಹೊಸದಿಲ್ಲಿ: ಚೀನಾದಲ್ಲಿ ಮೂರು ವರ್ಷಗಳಿಂದ ಜಾರಿಯಲ್ಲಿದ್ದ ಕಟ್ಟುನಿಟ್ಟಿನ ಕೋವಿಡ್ ಶೂನ್ಯ ನೀತಿಯನ್ನು ಹಠಾತ್ತನೇ ಅಂತ್ಯಗೊಳಿಸಿದ 20 ದಿನಗಳಲ್ಲೇ ದೇಶಕ್ಕೆ ಕೋವಿಡ್ ಸುನಾಮಿ ಅಪ್ಪಳಿಸಿದ್ದು, ಸುಮಾರು 25 ಕೋಟಿ ಮಂದಿಗೆ ಸೋಂಕು ತಗುಲಿದೆ ಎಂದು ಅಂದಾಜಿಸಲಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸೋರಿಕೆಯಾದ ಸರ್ಕಾರಿ ದಾಖಲೆಗಳನ್ನು ಉಲ್ಲೇಖಿಸಿ ರೇಡಿಯೊ ಫ್ರೀ ಏಷ್ಯಾ ಈ ಬಗ್ಗೆ ವರದಿ ಮಾಡಿದ್ದು, ಇದರ ಪ್ರಕಾರ 248 ದಶಲಕ್ಷ ಮಂದಿ ಡಿಸೆಂಬರ್ ನ ಮೊದಲ 20 ದಿನಗಳಲ್ಲಿ ಸೋಂಕಿತರಾಗಿದ್ದಾರೆ. ಚೀನಾ ಸರ್ಕಾರ ಡಿಸೆಂಬರ್ 20ರಂದು ಬಿಡುಗಡೆ ಮಾಡಿರುವ ಅಂದಾಜಿಗಿಂತ ಈ ಅಂಕಿ ಅಂಶ ಭಿನ್ನವಾಗಿದ್ದು, ಇದರ ಅನ್ವಯ ಮಂಗಳವಾರ ಒಂದೇ ದಿನ 3.7 ಕೋಟಿ ಮಂದಿಗೆ ಸೋಂಕು ತಗುಲಿದೆ.
ಪ್ರಸ್ತುತ ಬಿಎಫ್-7 ಪ್ರಬೇಧದ ಸೋಂಕು ವ್ಯಾಪಕವಾಗಿ ಹರಡಿದ್ದು, ಇದು ಬಹುತೇಕ ಮಂದಿ ಲಸಿಕೆ ಪಡೆಯದ ದೇಶಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಬಿಎಫ್.7 ಪ್ರಬೇಧ ಅತ್ಯಂತ ವೇಗವಾಗಿ ಪ್ರಸರಣಗೊಳ್ಳುವ ಪ್ರಬೇಧವಾಗಿದ್ದು, ಇದರ ಪುನರುತ್ಪತ್ತಿ ಪ್ರಮಾಣ 10 ರಿಂದ 18.6 ಪಟ್ಟು ಇದೆ. ಕಳೆದ ವರ್ಷ ವ್ಯಾಪಕವಾಗಿದ್ದ ಡೆಲ್ಟಾ ಪ್ರಭೇಧದ ಪ್ರಸರಣ ದರ 5 ರಿಂದ 6ರಷ್ಟಿತ್ತು.
ದೊಡ್ಡ ನಗರಗಳಲ್ಲಿ ವ್ಯಾಪಕವಾಗಿ ಹರಡಿರುವ ಸೋಂಕಿನಿಂದ ಚೇತರಿಸಿಕೊಳ್ಳಲು ಚೀನಾಗೆ ಕೆಲವು ತಿಂಗಳುಗಳೇ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.







