ಝಪೋರಿಝಿಯಾ ಅಣುಸ್ಥಾವರಕ್ಕೆ ಪುಟಿನ್ ಆಪ್ತಸಹಾಯಕ ಭೇಟಿ

ಕೀವ್, ಡಿ.28: ದಕ್ಷಿಣ ಉಕ್ರೇನ್ನಲ್ಲಿ ರಶ್ಯದ ನಿಯಂತ್ರಣದಲ್ಲಿರುವ ಝಪೋರಿಝಿಯಾ ಅಣುವಿದ್ಯುತ್ ಸ್ಥಾವರಕ್ಕೆ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ನಿಕಟ ಸಹಾಯಕ, ಪ್ರಭಾವೀ ಅಧಿಕಾರಿ ಸೆರ್ಗೈ ಕಿರಿಯೆಂಕೊ ಭೇಟಿ ನೀಡಿದ್ದಾರೆ ಎಂದು ಈ ವಲಯದಲ್ಲಿ ರಶ್ಯ ನೇಮಿಸಿರುವ ಅಧಿಕಾರಿ ಹೇಳಿದ್ದಾರೆ.
ರಶ್ಯದ ದೇಶೀಯ ರಾಜಕೀಯ ವ್ಯವಹಾರಗಳ ಮೇಲುಸ್ತುವಾರಿ ಅಧಿಕಾರಿ, ರಶ್ಯದ ಪರಮಾಣು ಸಂಸ್ಥೆಯ ಮಾಜಿ ಮುಖ್ಯಸ್ಥರಾಗಿರುವ ಕಿರಿಯೆಂಕೋ ಸ್ಥಾವರದ ಸುರಕ್ಷತೆ ಹಾಗೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ರಶ್ಯ ಪರಮಾಣು ಸಂಸ್ಥೆ ರೊಸಟೋಮ್ನ ಸಿಬಂದಿಗಳ ಕೆಲಸದ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದಾರೆ ಎಂದು ರಶ್ಯದ ಅಧಿಕಾರಿ ವ್ಲಾದಿಮೀರ್ ರೊಗೋವ್ ಹೇಳಿದ್ದಾರೆ.
ಈ ವರ್ಷದ ಮಾರ್ಚ್ನಲ್ಲಿ ಝಪೋರಿಝಿಯಾ ಸ್ಥಾವರ ರಶ್ಯದ ನಿಯಂತ್ರಣಕ್ಕೆ ಬಂದಿದೆ. ಉಕ್ರೇನ್ ಯುದ್ಧದ ಮುಂಚೂಣಿ ವಲಯದಲ್ಲಿ ಈ ಪ್ರಾಂತ ಇರುವುದರಿಂದ ಅಣುಸ್ಥಾವರದ ಸುರಕ್ಷತೆಯ ಬಗ್ಗೆ ಆತಂಕ ಮೂಡಿದೆ. ಸ್ಥಾವರದ ಸುತ್ತ ಪರಮಾಣು ಸುರಕ್ಷತೆ ಮತ್ತು ಭದ್ರತಾ ವಲಯವನ್ನು ನಿರ್ಮಿಸುವ ಬಗ್ಗೆ ಅಂತರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆ(ಐಎಇಎ) ಪ್ರಧಾನ ನಿರ್ದೇಶಕ ರಫೇಲ್ ಗ್ರಾಸಿ ಪ್ರಸ್ತಾವಿಸಿದ್ದಾರೆ.





