ದಕ್ಷಿಣ ಆಫ್ರಿಕಾದಲ್ಲಿ ಗುಂಡಿನ ದಾಳಿಯಲ್ಲಿ 8 ಮಂದಿ ಮೃತ್ಯು; ಮೂವರಿಗೆ ಗಾಯ
ಕೇಪ್ಟೌನ್, ಜ.30: ದಕ್ಷಿಣ ಆಫ್ರಿಕಾದಲ್ಲಿ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ತೊಡಗಿದ್ದ ಜನರ ಮೇಲೆ ನಡೆದ ಗುಂಡಿನ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದು ಇತರ 3 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಸೋಮವಾರ ಹೇಳಿದ್ದಾರೆ.
ದಕ್ಷಿಣದ ಬಂದರು ನಗರ ಕ್ವೆಬರ್ಹ(ಪೋರ್ಟ್ ಎಲಿಝಬೆತ್)ದಲ್ಲಿನ ಮನೆಯೊಂದರ ಮಾಲಕನ ಜನ್ಮದಿನಾಚರಣೆಯ ಔತಣಕೂಟ ನಡೆಯುತ್ತಿತ್ತು. ಆಗ ಇಬ್ಬರು ಅಪರಿಚಿತ ಬಂದೂಕುಧಾರಿಗಳು ಮನೆಯ ಆವರಣ ಪ್ರವೇಶಿಸಿ ಜನರ ಗುಂಪಿನ ಮೇಲೆ ಮನಬಂದಂತೆ ಗುಂಡು ಹಾರಿಸಿದಾಗ 8 ಮಂದಿ ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಹತ್ಯೆಯಾದವರಲ್ಲಿ ಮನೆಯ ಮಾಲಕನೂ ಸೇರಿದ್ದಾನೆ ಎಂದು ವರದಿಯಾಗಿದೆ.
ದಾಳಿಯ ಹಿಂದಿರುವ ಕಾರಣ ಸ್ಪಷ್ಟವಾಗಿಲ್ಲ. ದಾಳಿಕೋರರ ಪತ್ತೆಗೆ ಕಾರ್ಯಾಚರಣೆ ಮುಂದುವರಿಯುತ್ತಿದೆ ಎಂದು ಈಸ್ಟರ್ನ್ ಕೇಪ್ ಪ್ರಾಂತದ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
Next Story