ಟರ್ಕಿ, ಸಿರಿಯಾ ಭೂಕಂಪ: 3800 ದಾಟಿದ ಸಾವಿನ ಸಂಖ್ಯೆ
ಟರ್ಕಿ: ಟರ್ಕಿ ಹಾಗೂ ನೆರೆಯ ವಾಯವ್ಯ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 3800ನ್ನು ದಾಟಿದೆ. ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಲ್ಲಿ ಇತರ ಕನಿಷ್ಠ 15 ಸಾವಿರ ಮಂದಿ ಗಾಯಗೊಂಡಿದ್ದಾರೆ.
ಭೀಕರ ಭೂಕಂಪದಿಂದ ಅಪಾರ್ಟ್ಮೆಂಟ್ ಬ್ಲಾಕ್ಗಳು ಬೆಂಕಿಪೊಟ್ಟಣಗಳಂತೆ ಬುಡಮೇಲಾಗಿದ್ದು, ಆಸ್ಪತ್ರೆಗಳು ಧ್ವಂಸಗೊಂಡಿವೆ. ಸಾವಿರಾರು ಮಂದಿ ಗಾಯಗೊಂಡಿದ್ದಾರೆ ಅಥವಾ ನಿರ್ಗತಿಕರಾಗಿದ್ದಾರೆ.
ಪರಿಹಾರ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗಿದ್ದರೂ, ಮೈಕೊರೆಯುವ ಚಳಿ, ರಾತ್ರಿಯಿಡೀ ನಡೆದ ಬದುಕಿ ಉಳಿದವರ ಶೋಧ ಕಾರ್ಯಾಚರಣೆಗೆ ಅಡ್ಡಿಯಾಯಿತು. ರಾತ್ರಿ ತಾಪಮಾನ ಸೊನ್ನೆ ಡಿಗ್ರಿ ಸೆಲ್ಷಿಯಸ್ ತಲುಪಿದ್ದು, ಅವಶೇಷಗಳ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಮತ್ತು ನಿರ್ಗತಿಕರಾದವರು ಅಕ್ಷರಶಃ ನರಕ ಯಾತನೆ ಅನುಭವಿಸಬೇಕಾಯಿತು.
ಪ್ರಬಲ ಭೂಕಂಪದ ಬಳಿಕ ಸರಣಿ ಕಂಪನಗಳು ಸಮಭವಿಸಿದ್ದು, ಇದು 2021ರ ಆಗಸ್ಟ್ನಲ್ಲಿ ದಕ್ಷಿಣ ಅಟ್ಲಾಂಟಿಕ್ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದ ಬಳಿಕ ವಿಶ್ವದಲ್ಲೇ ದಾಖಲಾದ ಸುಧೀರ್ಘ ಕಂಪನಗಳು ಎಂದು ಅಮೆರಿಕದ ಜಿಯಲಾಜಿಕಲ್ ಸರ್ವೆ ಹೇಳಿದೆ.
ರಷ್ಯಾದ ತುರ್ತುಸೇವೆಗಳ ಸಚಿವಾಲಯದ ಪರಿಹಾರ ತಂಡಗಳು ಸಿರಿಯಾಗೆ ತೆರಳಲು ಸಜ್ಜಾಗಿವೆ. ರಷ್ಯನ್ ಸೇನೆ ಈಗಾಗಲೇ ದೇಶದಲ್ಲಿ 300 ಮಂದಿಯನ್ನು ಒಳಗೊಂಡ ಹತ್ತು ತಂಡಗಳನ್ನು ಶೋಧ ಕಾರ್ಯಾಚರಣೆಗಾಗಿ ನಿಯೋಜಿಸಿದೆ. ಮಾನವೀಯ ನೆರವಿನ ವಿತರಣೆಗೆ ಕೂಡಾ ರಷ್ಯಾದ ಸೇನೆ ಈಗಾಗಲೇ ಕೇಂದ್ರಗಳನ್ನು ಆರಂಭಿಸಿದೆ.
ರಷ್ಯಾ ಟರ್ಕಿಗೆ ಕೂಡಾ ನೆರವಿನ ಹಸ್ತ ಚಾಚಿದ್ದು, ಟರ್ಕಿ ಅದನ್ನು ಸ್ವೀಕರಿಸಿದೆ. ಖ್ಯಾತ ಫುಟ್ಬಾಲ್ ಆಟಗಾರ, ಚೆಲ್ಸಿಯಾ ಮತ್ತು ನ್ಯೂಕ್ಯಾಸೆಲ್ ಯುನೈಟೆಡ್ನ ಮಾಜಿ ಆಟಗಾರ ಕ್ರಿಸ್ಟಿಯನ್ ಅಟ್ಸು ಕೂಡಾ ಭೂಕಂಪದ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ವರದಿಗಳು ಹೇಳಿವೆ.