ಇಸ್ರೇಲ್ ನಲ್ಲಿ ಹೊಸ ಕೋವಿಡ್ ರೂಪಾಂತರ ಪತ್ತೆ: 2 ಪ್ರಕರಣ ದಾಖಲು

ಟೆಲ್ಅವೀವ್, ಮಾ.17: ದೇಶದಲ್ಲಿ ಗುರುತಿಸಲಾಗದ ಹೊಸ ಕೋವಿಡ್ ರೂಪಾಂತರದ ಎರಡು ಪ್ರಕರಣಗಳು ದಾಖಲಾಗಿರುವುದಾಗಿ ಇಸ್ರೇಲ್ ನ ಆರೋಗ್ಯ ಸಚಿವಾಲಯ ದೃಢಪಡಿಸಿದೆ.
ಈ ರೂಪಾಂತರವು ಬಿಎ.1(ಒಮಿಕ್ರಾನ್) ಮತ್ತು ಬಿಎ.2 ರೂಪಾಂತರಗಳ ಸಂಯೋಜನೆಯಾಗಿರಬಹುದು. ಬೆನ್-ಗ್ಯುರಿಯಾನ್ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದ ಪ್ರಯಾಣಿಕರಿಗೆ ನಡೆಸಿದ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ಸೋಂಕು ಪತ್ತೆಯಾಗಿದೆ . ಸುಮಾರು 30 ವರ್ಷ ವಯೋಮಾನದ ಇಬ್ಬರಲ್ಲಿ ಈ ಸೋಂಕು ಪತ್ತೆಯಾಗಿದ್ದು ರೋಗಿಗಳಿಗೆ ಜ್ವರ, ತಲೆನೋವು ಮತ್ತು ಸ್ನಾಯುನೋವಿನಂತಹ ಲಕ್ಷಣಗಳು ಕಾಣಿಸಿಕೊಂಡಿವೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಒಂದೇ ಕೋಶದಲ್ಲಿ ಎರಡು ವೈರಸ್ ಗಳ ಉಪಸ್ಥಿತಿಯಿಂದಾಗಿ ಎರಡು ವೈರಸ್ ಗಳ ಸಂಯೋಜನೆಯಾಗುತ್ತದೆ. ಎರಡು ವೈರಸ್ಗಳು ಅಭಿವೃದ್ಧಿಗೊಂಡು ಆನುವಂಶಿಕ ಗುಣಲಕ್ಷಣಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಇದು ಹೊಸ ರೂಪಾಂತರಿತ ಸೋಂಕಿನ ಉಗಮಕ್ಕೆ ಕಾರಣವಾಗುತ್ತದೆ ಎಂದು ಇಸ್ರೇಲ್ ನ ವಿಜ್ಞಾನಿ ಸಲ್ಮಾನ್ ಝರ್ಕಾ ಹೇಳಿದ್ದಾರೆ.
ಈ ಮಧ್ಯೆ, ಇಸ್ರೇಲ್ ನಲ್ಲಿ ಒಮಿಕ್ರಾನ್ ಪ್ರಕರಣಗಳು ಕಡಿಮೆಯಾಗುತ್ತಿದ್ದರೂ ಬಿಎ.2 ಸೋಂಕು ಪ್ರಕರಣ ಹೆಚ್ಚಳವಾಗುತ್ತಿದೆ. ಕೋವಿಡ್ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರೊಂದಿಗೆ ಸಭೆ ನಡೆಸಿದ ಪ್ರಧಾನಿ ಬೆಂಜಮಿನ್ ನೆಥನ್ಯಾಹು ಒಳಾಂಗಣ ಪ್ರದೇಶಗಳಲ್ಲಿ ಮಾಸ್ಕ್ ಧಾರಣೆ ನಿಯಮ ಕಡ್ಡಾಯಗೊಳಿಸುವಂತೆ ಸೂಚಿಸಿದ್ದಾರೆ ಮತ್ತು ಜನತೆ ಕೋವಿಡ್ ವಿರುದ್ಧದ ಲಸಿಕೆಯ 3 ಡೋಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಇಸ್ರೇಲ್ನಲ್ಲಿ ಈ ವಾರ 6,310 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದ್ದು ಇದರಲ್ಲಿ 335 ರೋಗಿಗಳ ಪರಿಸ್ಥಿತಿ ಗಂಭಿರವಾಗಿದೆ. 151 ಮಂದಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದೆ ಎಂದು ವರದಿಯಾಗಿದೆ.







