ಇಸ್ರೇಲ್: 1000 ವಸಾಹತು ಮನೆ ನಿರ್ಮಾಣ ಟೆಂಡರ್ ಗೆ ಅನುಮೋದನೆ
ರಮಲ್ಲಾ, ಮಾ.25: ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಬಲಪಂಥೀಯ ಸರಕಾರವು ಆಕ್ರಮಿತ ಪಶ್ಚಿಮದಂಡೆ ಮತ್ತು ಪೂರ್ವ ಜೆರುಸಲೇಮ್ನಲ್ಲಿರುವ ಯಹೂದಿ ವಸಾಹತುಗಳಲ್ಲಿ 1000ಕ್ಕೂ ಅಧಿಕ ಹೊಸ ಇಸ್ರೇಲಿ ಮನೆಗಳ ನಿರ್ಮಾಣದ ಬಿಡ್ಗಳನ್ನು ಅಧಿಕೃತಗೊಳಿಸಿದೆ.
ಪಶ್ಚಿಮ ದಂಡೆಯ ಎಫ್ರಾತ್ ಮತ್ತು ಬೈತರ್ ಇಲಿಟ್ ಪ್ರಾಂತದಲ್ಲಿ 940 ಮನೆಗಳನ್ನು, ಗಿಲೊ ವಸಾಹತು ಪ್ರದೇಶದಲ್ಲಿ 89 ಮನೆಗಳ ನಿರ್ಮಾಣಕ್ಕೆ ಇಸ್ರೇಲ್ ಭೂ ಪ್ರಾಧಿಕಾರ ಈ ವಾರದ ಆರಂಭದಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಿತ್ತು. ಈ ಎರಡೂ ಪ್ರದೇಶಗಳನ್ನು 1967ರ ಯುದ್ಧದಲ್ಲಿ ಇಸ್ರೇಲ್ ವಶಕ್ಕೆ ಪಡೆದಿದೆ.
ಇದೀಗ ಈ ಪ್ರದೇಶಗಳಲ್ಲಿ ಮನೆನಿರ್ಮಾಣ ಬಿಡ್ಗಳಿಗೆ ಸರಕಾರದ ಅನುಮೋದನೆಯ ವಿವರವನ್ನು ವಸಾಹತು-ವಿರೋಧಿ ಇಸ್ರೇಲ್ ಗುಂಪು `ಪೀಸ್ ನೌ' ಶುಕ್ರವಾರ ಪ್ರಕಟಿಸಿದ್ದು ಇದು ಮತ್ತೊಂದು ಹಾನಿಕಾರಕ ಮತ್ತು ಅನಗತ್ಯ ನಿರ್ಮಾಣ ಉಪಕ್ರಮವಾಗಿದೆ ಎಂದಿದೆ. ನೆತನ್ಯಾಹು ಸರಕಾರವು ಭವಿಷ್ಯದ ರಾಜಕೀಯ ಒಪ್ಪಂದದ ಸಾಧ್ಯತೆಯನ್ನು , ಅಮೆರಿಕ ಹಾಗೂ ಇತರ ಸ್ನೇಹಪರ ದೇಶಗಳೊಂದಿಗಿನ ನಮ್ಮ ಸಂಬಂಧವನ್ನು ತುಳಿಯುತ್ತಿದೆ ಎಂದು ಆರೋಪಿಸಿದ್ದು, ಫೆಲೆಸ್ತೀನಿಯನ್ ಪ್ರದೇಶಗಳಲ್ಲಿ 1,029 ಮನೆಗಳನ್ನು ನಿರ್ಮಿಸುವ ಟೆಂಡರ್ ಗಳನ್ನು ಸರಕಾರ ಜಾರಿಗೊಳಿಸಿದೆ ಎಂದು ಹೇಳಿದೆ.
ವಸಾಹತು ನಿರ್ಮಾಣ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವ ಪ್ರತಿಜ್ಞೆಗೆ ನೆತನ್ಯಾಹು ದ್ರೋಹ ಬಗೆದಿದ್ದಾರೆ ಮಾತ್ರವಲ್ಲ, ಅಮೆರಿಕ ಹಾಗೂ ಅಂತರಾಷ್ಟ್ರೀಯ ಪ್ರತಿಕ್ರಿಯೆಗಳಿಗೆ ಅಧಿಕೃತವಾಗಿ ನಿರ್ಲಕ್ಷ್ಯ ತೋರಿದ್ದಾರೆ. ಟೆಂಡರ್ ಗೆ ಅನುಮೋದನೆ ಅಮೆರಿಕದ ಮಧ್ಯಸ್ಥಿಕೆಯಲ್ಲಿ ಫೆಲೆಸ್ತೀನ್ ಮತ್ತು ಇಸ್ರೇಲ್ ಮಧ್ಯೆ ಒಪ್ಪಂದಕ್ಕೆ ಬರಲಾದ ಗ್ರಹಿಕೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಫೆಲೆಸ್ತೀನ್ ವಿದೇಶಾಂಗ ಇಲಾಖೆ ಟೀಕಿಸಿದೆ.