ಶಾಂಘೈ ಸಹಕಾರ ಸಂಘಟನೆಗೆ ಸೌದಿ ಸೇರ್ಪಡೆ
ರಿಯಾದ್, ಮಾ.29: ಶಾಂಘೈ ಸಹಕಾರ ಸಂಘಟನೆಗೆ ಸೇರ್ಪಡೆಯಾಗುವ ನಿರ್ಧಾರಕ್ಕೆ ಬುಧವಾರ ಸೌದಿ ಅರೆಬಿಯಾದ ಸಚಿವ ಸಂಪುಟ ಅನುಮೋದನೆ ನೀಡಿದ್ದು , ಚೀನಾದೊಂದಿಗೆ ದೀರ್ಘಾವಧಿಯ ಪಾಲುದಾರಿಕೆ ಸ್ಥಾಪಿಸುವ ನಿಟ್ಟಿನಲ್ಲಿ ಇದು ಪ್ರಮುಖ ಉಪಕ್ರಮವಾಗಿದೆ ಎಂದು ಸರಕಾರಿ ಸ್ವಾಮ್ಯದ ಸುದ್ಧಿಸಂಸ್ಥೆ ಎಸ್ಪಿಎ ವರದಿ ಮಾಡಿದೆ.
ಅಮೆರಿಕದ ಭದ್ರತಾ ಕಾಳಜಿಯ ಹೊರತಾಗಿಯೂ, ಸೌದಿ ಅರೆಬಿಯಾಕ್ಕೆ ಶಾಂಘೈ ಸಹಕಾರ ಸಂಘಟನೆ(ಎಸ್ಸಿಒ)ದಲ್ಲಿ ಸಂವಾದ ಪಾಲುದಾರನ ಪಾತ್ರವನ್ನು ನೀಡುವ ದಾಖಲೆಗೆ ಸೌದಿ ಸಂಪುಟ ಅನುಮೋದನೆ ನೀಡಿದೆ. ಎಸ್ಸಿಒ ರಶ್ಯ, ಚೀನಾ, ಭಾರತ ಸೇರಿದಂತೆ ಯುರೇಷಿಯಾದ ಹೆಚ್ಚಿನ ದೇಶಗಳ ರಾಜಕೀಯ ಮತ್ತು ಭದ್ರತಾ ಒಕ್ಕೂಟವಾಗಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಚೀನಾ ಅಧ್ಯಕ್ಷ ಕ್ಸಿಜಿಂಪಿಂಗ್ ಸೌದಿ ಅರೆಬಿಯಾಕ್ಕೆ ಭೇಟಿ ನೀಡಿದ್ದಾಗ ಎಸ್ಸಿಒ ಸದಸ್ಯತ್ವದ ಬಗ್ಗೆ ಚರ್ಚಿಸಲಾಗಿತ್ತು ಎಂದು ವರದಿಯಾಗಿದೆ. ಚೀನಾದೊಂದಿಗೆ ಸೌದಿಯ ಸಂಬಂಧ ಹೆಚ್ಚುತ್ತಿರುವುದು ಸೌದಿಯ ಸಾಂಪ್ರದಾಯಿಕ ಮಿತ್ರರಾಷ್ಟ್ರವಾದ ಅಮೆರಿಕದಲ್ಲಿ ಭದ್ರತಾ ಕಾಳಜಿಯನ್ನು ಹೆಚ್ಚಿಸಿದೆ.
ಈ ವಲಯದಲ್ಲಿ ಪಾಶ್ಚಿಮಾತ್ಯರ ಪ್ರಭಾವವನ್ನು ಸರಿದೂಗಿಸುವ ನಿಟ್ಟಿನಲ್ಲಿ 2001ರಲ್ಲಿ ಸ್ಥಾಪನೆಯಾಗಿರುವ ಎಸ್ಸಿಒ ಸದಸ್ಯತ್ವವನ್ನು ವಿಸ್ತರಿಸಿ ಭಾರತ ಮತ್ತು ಪಾಕಿಸ್ತಾನವನ್ನು ಸೇರ್ಪಡೆಗೊಳಿಸಲಾಗಿದೆ. ಕಳೆದ ವರ್ಷ ಎಸ್ಸಿಒದ ಪೂರ್ಣ ಸದಸ್ಯತ್ವಕ್ಕೆ ಇರಾನ್ ಸಹಿ ಹಾಕಿದೆ.