ರೊಹಿಂಗ್ಯರನ್ನು ವಾಪಸ್ ಕಳುಹಿಸುವ ಭಾರತದ ಯೋಜನೆಗೆ ವಿರೋಧ
ಇದು ಅವರನ್ನು ಶಾರ್ಕ್‌ಗಳಿಗೆ ತಿನ್ನಿಸಿದಂತೆ

ವಾಶಿಂಗ್ಟನ್, ಎ. 6: ಮ್ಯಾನ್ಮಾರ್‌ನ 40,000 ರೊಹಿಂಗ್ಯ ಮುಸ್ಲಿಮ್ ನಿರಾಶ್ರಿತರನ್ನು ಗುರುತಿಸಿ, ಬಂಧಿಸಿ, ಗಡಿಪಾರು ಮಾಡಲು ಭಾರತ ಸರಕಾರ ಚಿಂತಿಸುತ್ತಿದೆ ಎಂಬ ವರದಿಗಳ ಬಗ್ಗೆ ಸಮುದಾಯದ ನಾಯಕತ್ವ ಮತ್ತು ಮಾನವಹಕ್ಕುಗಳ ಸಂಘಟನೆಗಳು ಕಳವಳ ವ್ಯಕ್ತಪಡಿಸಿವೆ. ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಅವು ಹೇಳಿವೆ.
ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ವಾಸಿಸುತ್ತಿರುವ ಸಣ್ಣ ಸಮುದಾಯವಾಗಿರುವ ರೊಹಿಂಗ್ಯ ಮುಸ್ಲಿಮರು ಮ್ಯಾನ್ಮಾರ್ ಸರಕಾರ, ಸೇನೆ ಮತ್ತು ಬೌದ್ಧ ರಾಷ್ಟ್ರೀಯವಾದಿಗಳಿಂದ ಹಲವಾರು ವರ್ಷಗಳಿಂದ ಕಿರುಕುಳಕ್ಕೆ ಒಳಗಾಗುತ್ತಾ ಬಂದಿದ್ದಾರೆ.
ಕಳೆದ ಐದು ವರ್ಷಗಳಲ್ಲಿ ಲಕ್ಷಾಂತರ ರೊಹಿಂಗ್ಯರು ದೇಶ ತೊರೆದು ನೆರೆಯ ದೇಶಗಳಿಗೆ ಪಲಾಯನಗೈದಿದ್ದಾರೆ. ಭಾರತದ ವಿವಿಧ ಭಾಗಗಳಲ್ಲಿ ಸುಮಾರು 40,000 ರೊಹಿಂಗ್ಯ ಮುಸ್ಲಿಮರು ದಾಖಲುಗೊಳ್ಳದ ನಿರಾಶ್ರಿತರಾಗಿ ವಾಸಿಸುತ್ತಿದ್ದಾರೆ ಎಂದು ಭಾರತೀಯ ಗೃಹ ಇಲಾಖೆ ಅಂದಾಜಿಸಿದೆ. ಈ ಪೈಕಿ 10,000ಕ್ಕೂ ಅಧಿಕ ಮಂದಿ ಜಮ್ಮುವಿನಲ್ಲಿ ವಾಸಿಸುತ್ತಿದ್ದಾರೆ ಎನ್ನಲಾಗಿದೆ.
ಆದಾಗ್ಯೂ, ರೊಹಿಂಗ್ಯ ಮುಸ್ಲಿಮರನ್ನು ನಿರಾಶ್ರಿತರೆಂದು ಭಾರತ ಅಧಿಕೃತವಾಗಿ ಗುರುತಿಸಿಲ್ಲ. ‘ಅಕ್ರಮ’ ರೊಹಿಂಗ್ಯ ನಿರಾಶ್ರಿತರನ್ನು ಗುರುತಿಸಿ, ಬಂಧಿಸಿ, ವಿದೇಶೀಯರ ಕಾಯಿದೆಯಡಿ ಗಡಿಪಾರು ಮಾಡುವ ಕೇಂದ್ರ ಸರಕಾರದ ಯೋಜನೆಯ ಬಗ್ಗೆ ಚರ್ಚಿಸಲು ಗೃಹ ಸಚಿವಾಲಯದ ಅಧಿಕಾರಿಗಳು ಎಪ್ರಿಲ್ 3ರಂದು ಸಭೆಯೊಂದನ್ನು ನಡೆಸಿದ್ದರು ಎನ್ನಲಾಗಿದೆ.
ಇದು ಅಂತಾರಾಷ್ಟ್ರೀಯ ಕಾನೂನಿನಡಿ ಬರುವ ಭಾರತದ ಬದ್ಧತೆಗಳ ಸಾರಾಸಗಟು ಉಲ್ಲಂಘನೆಯಾಗಿರುತ್ತದೆ ಎಂದು ಮಾನವಹಕ್ಕುಗಳ ಸಂಘಟನೆ ಆ್ಯಮ್ನೆಸ್ಟಿ ಹೇಳಿದೆ. ಯಾಕೆಂದರೆ, ಈ ಕ್ರಮವು ಭಯಾನಕ ದೌರ್ಜನ್ಯಗಳಿಗೆ ಈಡಾದ ಸ್ಥಳಕ್ಕೆ ಮತ್ತೆ ರೊಹಿಂಗ್ಯರನ್ನು ಕಳುಹಿಸುವುದಾಗಿದೆ ಎಂದು ಅದು ತಿಳಿಸಿದೆ.







