ದುಬಾರಿ ಬೈಕ್ಗಳ ಕಳವು: ಐವರ ಬಂಧನ, 46 ಬೈಕ್ಗಳ ವಶ

ಬೆಂಗಳೂರು, ಜು.7: ದುಬಾರಿ ಬೆಲೆಯ ಬೈಕ್ಗಳನ್ನೆ ಗುರಿಯಾಗಿಸಿಕೊಂಡು ಕಳವು ಮಾಡುತ್ತಿದ್ದ ಯುವಕರ ಗುಂಪನ್ನು ಪತ್ತೆಹಚ್ಚಿ ಐವರನ್ನು ಬಂಧಿಸಿ, ಬರೋಬ್ಬರಿ 75 ಲಕ್ಷ ಮೌಲ್ಯದ 46 ಬೈಕ್ನ್ನು ವಶಕ್ಕೆ ಪಡೆಯುವಲ್ಲಿ ಇಲ್ಲಿನ ಆಗ್ನೇಯ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡಿನ ವೇಲೂರು ಜಿಲ್ಲೆಯ ಆಂಬೂರಿನ ಮುಝಾಯಿದ್ (24), ಮುಸ್ತಾಕಿನ್ (19), ಇಸ್ತಿಯಾಖ್ (19), ಝುಲ್ಫಿಕರ್ (20) ಹಾಗೂ ವಾಣಂಬಾಡಿಯ ಅಹ್ಮದ್ ಬಂಧಿತ ಆರೋಪಿಗಳೆಂದು ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ತಿಳಿಸಿದ್ದಾರೆ.
ಆಗ್ನೇಯ ವಿಭಾಗದ ಎಎಸ್ಆರ್ ಲೇಔಟ್, ಪರಪ್ಪನ ಅಗ್ರಹಾರ, ಬಂಡೇಪಾಳ್ಯ ಇನ್ನಿತರೆ ಕಡೆಗಳಲ್ಲಿ ರಾತ್ರಿ ವೇಳೆ ದುಬಾರಿ ಬೆಲೆಯ ಬೈಕ್ಗಳು ಕಳುವಾಗುತ್ತಿರುವ ಹಲವು ಪ್ರಕರಣಗಳು ದಾಖಲಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿ ರಚಿಸಲಾಗಿದ್ದ ಎಚ್ಎಸ್ಆರ್ ಲೇಔಟ್ ಪೊಲೀಸರ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡಿದೆ.
ಎಚ್ಎಸ್ಆರ್ ಲೇಔಟ್ ಬಳಿ 2 ದಿನಗಳ ಹಿಂದೆ ಎರ್ಟಿಗಾ ಕಾರಿನಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಅವರೆಲ್ಲರೂ ಆಂಬೂರಿನವರಾಗಿದ್ದಾರೆನ್ನುವುದು ತಿಳಿದು ಬಂದಿದೆ.
ಹೆಚ್ಚಿನ ವಿಚಾರಣೆ ಕೈಗೊಂಡಾಗ ಬೈಕ್ಗಳನ್ನು ಕಳವು ಮಾಡುತ್ತಿರುವುದು ಪತ್ತೆಯಾಯಿತು. ತನಿಖೆ ಮುಂದುವರೆಸಿದಾಗ ಆರೋಪಿಗಳು ಕಳವು ಮಾಡಿದ 75 ಲಕ್ಷ ಮೌಲ್ಯದ 46ಬೈಕ್ಗಳನ್ನು ಜಪ್ತಿ ಮಾಡಲಾಗಿದೆ.







