ಮಾನಸಿಕ ಸ್ಥಿಮಿತ ಕಳೆದುಕೊಂಡ ಶ್ರೀರಾಮುಲು: ಸಂಸದ ಡಿ.ಕೆ.ಸುರೇಶ್
ಬೆಂಗಳೂರು, ಅ. 26: ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಮನಸೋ ಇಚ್ಛೆ ಮಾತನಾಡುತ್ತಿರುವ ಶಾಸಕ ಶ್ರೀರಾಮುಲು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ ಎಂದು ಸಂಸದ ಡಿ.ಕೆ.ಸುರೇಶ್ ಟೀಕಿಸಿದ್ದಾರೆ.
ಶುಕ್ರವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಪ್ರಚೋದನಾತ್ಮಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಮತದಾರರನ್ನು ಸೆಳೆಯಲು ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಸಲ್ಲದ ಆರೋಪ ಮಾಡುವುದು ಅವರಿಗೆ ಶೋಭೆಯಲ್ಲ ಎಂದು ಆಕ್ಷೇಪಿಸಿದರು.
ಮಾಜಿ ಸಚಿವ ವಿ.ಸೋಮಣ್ಣ ಹಾಗೂ ಶ್ರೀರಾಮುಲು ಇಬ್ಬರೂ ಒಳ್ಳೆಯ ನಾಯಕರು. ಇವರಿಬ್ಬರಲ್ಲಿ ಯಾರು ಬೇಕಾದರೂ ಮುಖ್ಯಮಂತ್ರಿಯಾಗಲಿ ಎಂದು ಲೇವಡಿ ಮಾಡಿದ ಡಿ.ಕೆ.ಸುರೇಶ್, ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಪರ ಅವರ ತಂದೆಯೇ ಪ್ರಚಾರ ಮಾಡುವುದಿಲ್ಲ ಎಂದು ಹೇಳಿದರು.
ವರಿಷ್ಠರ ಸೂಚನೆಯಂತೆ ನಾವು ಮೈತ್ರಿ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದು, ಸಚಿವ ಶಿವಕುಮಾರ್ ಹಾಗೂ ಸಿಎಂ ಕುಮಾರಸ್ವಾಮಿ ರಾಮನಗರ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆಂದ ಅವರು, ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಗೆಲುವು ನಿಶ್ಚಿತ ಎಂದು ಭರವಸೆ ವ್ಯಕ್ತಪಡಿಸಿದರು.