‘ಮೆಟ್ರೋ-ಬಿಎಂಟಿಸಿ’ ಕಾಮನ್ ಫೇರ್ ಕಾರ್ಡ್ ಪರಿಚಯಿಸಲು ಚಿಂತನೆ: ಪರಮೇಶ್ವರ್

ಬೆಂಗಳೂರು, ಅ. 26: ಮೆಟ್ರೋ ಹಾಗೂ ಬಿಎಂಟಿಸಿ ಬಸ್ಗಳಲ್ಲಿ ಸಂಚರಿಸಲು ಕಾಮನ್ ಫೇರ್ ಕಾರ್ಡ್ ಪರಿಚಯಿಸಲು ಚಿಂತಿಸಿದ್ದು, ಉಪಚುನಾವಣೆ ಬಳಿಕ ಈ ಕುರಿತು ಕ್ರಮಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಶಾಂತಿನಗರದಲ್ಲಿ ಬಿಎಂಆರ್ಸಿಎಲ್ನ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿನಿತ್ಯ ಮೆಟ್ರೋದಲ್ಲಿ 5 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಸಂಚರಿಸುತ್ತಿದ್ದು, ಆರು ಬೋಗಿಯನ್ನು ಹಂತ-ಹಂತವಾಗಿ ಮಾಡುವುದರಿಂದ ಈ ಸಂಖ್ಯೆ ದ್ವಿಗುಣವಾಗಲಿದೆ ಎಂದರು.
ಬಿಎಂಟಿಸಿ ಹಾಗೂ ಮೆಟ್ರೋ ರೈಲಿನಲ್ಲಿ ಸಂಚರಿಸಲು ಒಂದೇ ಕಾರ್ಡ್ ಪರಿಚಯಿಸಿದರೆ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಸಂಬಂಧ ಚರ್ಚೆ ಮಾಡಿ ಶೀಘ್ರದಲ್ಲೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಪರಮೇಶ್ವರ್ ಇದೇ ವೇಳೆ ತಿಳಿಸಿದರು.
ಬಿಎಂಟಿಸಿ, ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ಬಿ, ಬಿಎಂಆರ್ಡಿಎ, ಮೆಟ್ರೋ ಎಲ್ಲ ಮೆಟ್ರೋ ಪಾಲಿಟಿಕ್ ನಿಗಮಗಳ ಸಮನ್ವಯತೆ ಕಾಪಾಡಲು ಚಿಂತಿಸಲಾಗಿದೆ ಎಂದ ಅವರು, ಮೆಟ್ರೋ ನಿಗಮದಿಂದ ತಿಂಗಳಿಗೆ 30 ಕೋಟಿ ರೂ.ಆದಾಯ ಬರುತ್ತಿದ್ದು, 24 ಕೋಟಿ ರೂ.ವೆಚ್ಚವಾಗುತ್ತಿದೆ. ಭದ್ರತಾ, ಟಿಕೆಟ್ ವಿತರಕರು ಸೇರಿದಂತೆ ಅನಗತ್ಯ ಮಾನವಸಂಪನ್ಮೂಲ ಬಳಕೆಗೆ ಕಡಿವಾಣ ಹಾಕಿ, ತಿಂಗಳಿಗೆ ಕನಿಷ್ಠ 5 ಕೋಟಿ ರೂ.ಗಳಷ್ಟು ವೆಚ್ಚ ಕಡಿಮೆ ಮಾಡಲು ಸೂಚಿಸಿದ್ದೇನೆ ಎಂದ ಅವರು, ಮೆಟ್ರೋ ಎರಡನೆ ಹಂತ 2020ರ ವೇಳೆಗೆ ಮೈಸೂರು ರಸ್ತೆ, ತುಮಕೂರು ರಸ್ತೆ ಸಂಪೂರ್ಣವಾಗಲಿದೆ ಎಂದರು.
ವೈಟ್ಫೀಲ್ಡ್, ಆರ್ವಿ ರಸ್ತೆ, ಬಿಮ್ಮಸಂದ್ರ ಮಾರ್ಗವು 2021ಕ್ಕೆ ಪೂರ್ಣಗೊಂಡರೆ, ಗೊಟ್ಟಿಗೆರೆ, ನಾಗವಾರ ಮಾರ್ಗ 2023ಕ್ಕೆ ಮುಗಿಯಲಿದೆ. ಈ ಹಂತಕ್ಕೆ 26,405 ಕೋಟಿ ರೂ. ವೆಚ್ಚವಾಗಲಿದೆ. ಆದರೆ ಪೂರ್ಣಗೊಳ್ಳುವ ಒಳಗಾಗಿ 32 ಸಾವಿರ ಕೋಟಿ ರೂ.ಗೆ ತಲುಪಬಹುದು ಎಂದು ಪರಮೇಶ್ವರ್ ತಿಳಿಸಿದರು.
ಕೆಂಪೇಗೌಡ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಮಾರ್ಗದ ಮೆಟ್ರೋ ನಿರ್ಮಾಣದ ವಿಚಾರ ಇನ್ನು 15 ದಿನದೊಳಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಸ್ಪಷ್ಟಣೆ ನೀಡಿದರು.
‘ಒಲಿಂಪಿಕ್ಸ್ ನಲ್ಲಿ ಪದಕ ಗೆದ್ದಿರುವ ಪ್ರತಿ ಕ್ರೀಡಾಪಟುವಿಗೂ ಕ್ರೀಡಾ ಇಲಾಖೆ ಸಾಮಾನ್ಯವಾಗಿ ಗೌರವ ಮೊತ್ತವನ್ನು ನೀಡಲಿದೆ. ಆದರೆ, ಅಂತರ್ರಾಷ್ಟ್ರೀಯ ಕ್ರೀಡಾಪಟು ವಿಶ್ವನಾಥ್ ಗಾಣಿಗ ಅವರಿಗೆ ಗೌರವ ಮೊತ್ತ ನೀಡಿಲ್ಲವೆಂದರೆ ಅವರಿಗೆ ಕೂಡಲೇ ನೀಡಲು ಸೂಚನೆ ನೀಡುತ್ತೇನೆ’
-ಡಾ.ಜಿ.ಪರಮೇಶ್ವರ್, ಉಪ ಮುಖ್ಯಮಂತ್ರಿ







