ವೇಶ್ಯಾವಾಟಿಕೆ ದಂಧೆ: ಲೈವ್ ಬ್ಯಾಂಡ್ ಮಾಲಕ ಸೇರಿ ಮೂವರ ಬಂಧನ
ಬೆಂಗಳೂರು, ಆ.28: ಹೊಟೇಲ್ವೊಂದರಲ್ಲಿ ಯುವತಿಯರನ್ನಿಟ್ಟು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದಡಿ ಲೈವ್ ಬ್ಯಾಂಡ್ ಮಾಲಕ ಸೇರಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೆಆರ್ ಪೇಟೆ ತಾಲೂಕಿನ ದುಗ್ಗನಹಳ್ಳಿ ನಿವಾಸಿ ಡಿ.ಎನ್.ಲಕ್ಷ್ಮಣ, ಸಂತೆಬಾಚಳ್ಳಿ ನಿವಾಸಿ ಶಿವರಾಜು ಹಾಗೂ ಬಿ.ಬಾಚಳ್ಳಿ ಗ್ರಾಮದ ನಿವಾಸಿಯೂ ಆಗಿರುವ ಲೈವ್ ಬ್ಯಾಂಡ್ ಮಾಲಕ ರವಿಕುಮಾರ್ ಎಂಬವರು ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.
ಗಾಂಧಿನಗರದ 5 ನೆ ಕ್ರಾಸ್ನಲ್ಲಿರುವ ಹೊಟೇಲ್ವೊಂದರ ವ್ಯವಸ್ಥಾಪಕನನ್ನು ಸಂಪರ್ಕ ಮಾಡಿಕೊಂಡು, ಕೊಠಡಿಗಳನ್ನು ಪಡೆದು ಹುಡುಗಿಯರನ್ನಿಟ್ಟು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ಸಂಬಂಧ ವೇಶ್ಯಾವಾಟಿಕೆಗೆ ತೊಡಗಿಸಿದ್ದ ಹೊರರಾಜ್ಯದ 4 ಯುವತಿಯರನ್ನು ವೇಶ್ಯಾವಾಟಿಕೆಯಿಂದ ರಕ್ಷಣೆ ಮಾಡಲಾಗಿದ್ದು, ಆರೋಪಿಗಳಿಂದ 28 ಸಾವಿರ ರೂ. ನಗದು, ಮೂರು ಮೊಬೈಲ್, ಕಾರು ಜಪ್ತಿ ಮಾಡಲಾಗಿದೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗಿದೆ.