ಫೆ.17ರಿಂದ ಅಧಿವೇಶನ: ವಿಧಾನಸೌಧದ ಸುತ್ತಮುತ್ತ ನಿಷೇಧಾಜ್ಞೆ
ಬೆಂಗಳೂರು, ಫೆ.14: ರಾಜಧಾನಿ ಬೆಂಗಳೂರಿನ ವಿಧಾನಸೌಧದಲ್ಲಿ ಫೆ.17ರಿಂದ ನಾಲ್ಕು ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ಮುಂಜಾಗ್ರತಾ ಕ್ರಮವಾಗಿ ವಿಧಾನಸೌಧ ಸುತ್ತಮುತ್ತ 2 ಕಿ.ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದು, ಫೆ.17ರ ಬೆಳಗ್ಗೆ 6 ರಿಂದ ಫೆ.20ರಂದು ಮಧ್ಯರಾತ್ರಿವರೆಗೂ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
ವಿಧಾನಸೌಧ ಸುತ್ತಮುತ್ತ ಹಾಗೂ ನಗರದಲ್ಲಿ ರಾಜಕೀಯ ಪಕ್ಷಗಳ ಮುಖಂಡರು, ಅವರ ಅನುಯಾಯಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ. ಆ ರೀತಿಯಾದರೆ ಪರಸ್ಪರ ಘರ್ಷಣೆ ಉಂಟಾಗಲಿದ್ದು, ಸಾರ್ವಜನಿಕರಿಗೆ ತೊಂದರೆ ಆಗಲಿದೆ. ಶಾಂತಿ ಕಾಪಾಡುವ ಉದ್ದೇಶದಿಂದ ಈ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
ನಿಷೇಧ: ಕಾನೂನು ಭಂಗ ಉಂಟು ಮಾಡುವ ಉದ್ದೇಶದಿಂದ 5 ಅಥವಾ ಅದಕ್ಕಿಂತ ಹೆಚ್ಚು ಜನ ಗುಂಪು ಸೇರುವಂತಿಲ್ಲ. ಮೆರವಣಿಗೆ, ಪ್ರತಿಭಟನೆ, ಧರಣಿ ಮತ್ತು ಸಭೆ ನಡೆಸುವಂತಿಲ್ಲ. ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಸೇರಿದಂತೆ ಯಾವುದೇ ಮಾರಕಾಸ್ತ್ರಗಳನ್ನು ಹಿಡಿದು ಓಡಾಡುವಂತಿಲ್ಲ.
ಯಾವುದೇ ಸ್ಫೋಟಕ ವಸ್ತುಗಳನ್ನು ಸಾಗಿಸುವಂತಿಲ್ಲ, ಇಟ್ಟುಕೊಳ್ಳುವಂತಿಲ್ಲ. ವ್ಯಕ್ತಿಗಳ ಅಥವಾ ಶವಗಳ ಪ್ರತಿಕೃತಿಗಳ ಪ್ರದರ್ಶನ ಮಾಡುವಂತಿಲ್ಲ. ಪ್ರಚೋದನಕಾರಿಯಾದ ಬಹಿರಂಗ ಘೋಷಣೆ ಕೂಗುವಂತಿಲ್ಲ. ಸಂಜ್ಞೆ ಮಾಡುವುದು, ಹಾಡುವುದು, ಸಂಗೀತ ನುಡಿಸುವುದು, ಚಿತ್ರಗಳನ್ನು ಬಿಡಿಸುವುದನ್ನು ನಿಷೇಧಿಸಲಾಗಿದೆ ಎಂದು ಪ್ರಕಟನೆಯಲ್ಲಿ ಆಯುಕ್ತರು ತಿಳಿಸಿದ್ದಾರೆ.