ಬೈಕ್ಗಳ ನಡುವೆ ಢಿಕ್ಕಿ: ಓರ್ವ ಮೃತ್ಯು
ಬೆಂಗಳೂರು, ಫೆ.29: ಎರಡು ಬೈಕ್ಗಳ ನಡುವೆ ಢಿಕ್ಕಿ ಸಂಭವಿಸಿ ಸ್ವಿಗ್ಗಿ ನೌಕರ ಮೃತಪಟ್ಟರೆ, ನಾಲ್ವರು ಗಾಯಗೊಂಡಿರುವ ಘಟನೆ ಇಲ್ಲಿನ ಚಿಕ್ಕಜಾಲದ ಚೊಕ್ಕನಹಳ್ಳಿ ಕ್ರಾಸ್ ಬಳಿ ನಡೆದಿದೆ ಎಂದು ವರದಿಯಾಗಿದೆ.
ಮಾರುತಿ ನಗರದ ಮಂಜುನಾಥ್(40) ಮೃತ ನೌಕರನಾಗಿದ್ದು, ಮತ್ತೊಂದು ಬೈಕ್ನಲ್ಲಿದ್ದ ಹೆಗಡೆ ನಗರದ ಹನೀಫ್ ಹಾಗೂ ಆತನ ಪತ್ನಿ ಸೇರಿ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ತಿಳಿದುಬಂದಿದೆ.
ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಮಂಜುನಾಥ್, ಶುಕ್ರವಾರ ತಡ ರಾತ್ರಿ ಕೆಲಸ ಮುಗಿಸಿಕೊಂಡು ಬೈಕ್ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಹೆಗಡೆ ನಗರ ಮುಖ್ಯರಸ್ತೆಯ ಚೊಕ್ಕನಹಳ್ಳಿ ಕ್ರಾಸ್ನಲ್ಲಿ ಎದುರಿನಿಂದ ಕುಟುಂಬಸ್ಥರೊಂದಿಗೆ ಬಂದ ಹನೀಫ್ ಅವರ ಬೈಕ್ ಪರಸ್ಪರ ಢಿಕ್ಕಿ ಹೊಡೆದ ಪರಿಣಾಮ ಮಂಜುನಾಥ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಪ್ರಕರಣ ದಾಖಲಿಸಿರುವ ಚಿಕ್ಕಜಾಲ ಸಂಚಾರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Next Story