''ಇಷ್ಟೊಂದು ದಂಡ ಏಕೆ? ನೀವೇ ಒಂದು ಮಾಸ್ಕ್ ಕೊಡಿ'': 1 ಸಾವಿರ ರೂ. ದಂಡಕ್ಕೆ ಜನರ ಅಸಮಾಧಾನ
ಸಾಂದರ್ಭಿಕ ಚಿತ್ರ
ಬೆಂಗಳೂರು, ಅ.3: ಕೋವಿಡ್-19 ಸಂಬಂಧ ರಾಜ್ಯ ಸರಕಾರ ನಗರದ ಪ್ರದೇಶಗಳಲ್ಲಿ ಮಾಸ್ಕ್ ಧರಿಸದವರಿಗೆ 1 ಸಾವಿರ ರೂ. ದಂಡದ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಿರುವ ಬಿಬಿಎಂಪಿ ಕ್ರಮಕ್ಕೆ ರಾಜಧಾನಿ ಬೆಂಗಳೂರಿನಲ್ಲಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಈ ಹಿಂದೆ 200 ರೂ. ಇದ್ದ ದಂಡವನ್ನು ದಿಢೀರ್ 5 ರಷ್ಟು ಪಟ್ಟು ಹೆಚ್ಚಿಸಿ ನಗರದೆಲ್ಲೆಡೆ ವಸೂಲಿ ಮಾಡಲಾಗುತ್ತಿದೆ. ಇದು ಬಿಬಿಎಂಪಿ ಅವೈಜ್ಞಾನಿಕ ಕ್ರಮವಾಗಿದ್ದು, ದಂಡ ಕಟ್ಟುವ ನಮಗೆ ಆಗುವ ಪ್ರಯೋಜನವಾದರೂ ಏನು? ಎಂದು 1 ಸಾವಿರ ರೂ. ದಂಡದ ಕುರಿತು ಜನರು ಪ್ರಶ್ನಿಸಿದ್ದಾರೆ.
ಇಷ್ಟೊಂದು ದುಡ್ಡು ಯಾರು ಕಟ್ಟೋದು?: ನಗರದ ಕೆಆರ್ ಮಾರುಕಟ್ಟೆಯಲ್ಲಿ ಬೆಳಗ್ಗೆ ಲಾರಿಗಳಿಂದ ಮೂಟೆಗಳನ್ನು ಇಳಿಸಿ ಹೆಗಲ ಮೇಲೆ ಹಾಕಿ ಇತ್ತ, ಚಿಲ್ಲರೆ ವ್ಯಾಪಾರ ಮಾಡುವ ಕಡೆ ಬರಬೇಕು. ಮಾಸ್ಕ್ ಇದ್ದರೆ ಉಸಿರು ನಿಂತು ಹೋಯಿತೇನು ಎನ್ನುವಂತೆ ಆಗುತ್ತೆ, ಹಾಗಾಗಿ, ಧರಿಸುತ್ತಿರಲಿಲ್ಲ. ಆದರೆ, ಶನಿವಾರ ಬೆಳಗ್ಗೆ ದಿಢೀರ್ ಮಾರ್ಷಲ್ ಬಂದು, 1 ಸಾವಿರ ರೂ. ದಂಡ ಕಟ್ಟುವಂತೆ ಮಿಷನ್ನಲ್ಲಿ ಚೀಟಿ ಹರಿದುಕೊಟ್ಟು ಹಣ ವಸೂಲಿ ಮಾಡಿಕೊಂಡರು. ಇದರಿಂದ ಈಗಲೂ ನಾನು ಆತಂಕದಲ್ಲಿದ್ದೇನೆ. ಹೇಳದೆ, ಕೇಳದೆ, ಇಷ್ಟೊಂದು ದುಡ್ಡು ಕೇಳಿದರೆ, ಕಟ್ಟೋದು ಯಾರು ಎಂದು ವ್ಯಾಪಾರಿ ನಾಗಪ್ಪ ಅಳಲು ತೊಡಿಕೊಂಡರು.
ಮಾಸ್ಕ್ ಕೊಡಿ?: ಇಲ್ಲಿನ ಆರ್ಟಿ ನಗರ ಮುಖ್ಯ ರಸ್ತೆಯ ಅಂಚೆ ಕಚೇರಿ ಬಳಿ ಮಧ್ಯಾಹ್ನ ವೇಳೆಗೆ 1 ಸಾವಿರ ರೂ. ದಂಡ ಪಾವತಿ ಮಾಡಿದ ರಾಧಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆ, ಮಾರ್ಷಲ್ಗಳೊಂದಿಗೆ ವಾಗ್ವಾದಕ್ಕಿಳಿದ ಪ್ರಸಂಗ ಜರುಗಿತು.
1 ಸಾವಿರ ತೆಗೆದುಕೊಂಡು ನಮಗೆ ನೀವು ಏನು ಕೊಡುತ್ತೀರಾ? ಒಂದು ಮಾಸ್ಕ್ ಅನ್ನು ನೀಡುವ ಯೋಗ್ಯತೆ ನಿಮಗಿಲ್ಲ. ಹೀಗಿರುವಾಗ, ನನ್ನ ಬಳಿಯ ಗರಿ ಗರಿ ನಿಮಗೆ ಏಕೆ ಕೊಡಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
''ಸರ್, ನೀವು 1 ಸಾವಿರ ಕಟ್ಟಿ ಎಂದರೆ ಹೇಗೆ? ನನಗೆ ಹೊಸ ನಿಯಮದ ಬಗ್ಗೆ ಗೊತ್ತಿಲ್ಲ. ಮೊದಲು ಇದರ ಬಗ್ಗೆ ಹೇಳಬೇಕಿತ್ತು. ಅಥವಾ ಒಂದು ದಿನಾಂಕ ನಿಗದಿ ಮಾಡಬೇಕಿತ್ತು. ತದನಂತರವೂ ತಪ್ಪಾದರೆ, ದಂಡ ವಸೂಲಿ ಮಾಡಿ'' ಎಂದು ದಂಡ ಕಟ್ಟಿದ ಮತ್ತೋರ್ವ ಮಹಿಳೆ ಮಾರ್ಷಲ್ ಗಳ ವಿರುದ್ಧ ಬೇಸರ ವ್ಯಕ್ತಪಡಿಸಿದರು.
152 ರೂ.ತೆಗೆದುಕೊಂಡು ಬಿಡಿ?: ಬೆಳಗ್ಗೆ ತಳ್ಳುವ ಗಾಡಿಯಲ್ಲಿ ತೆಂಗಿನ ಕಾಯಿ ವ್ಯಾಪಾರಕ್ಕೆ ಹೊರಟ್ಟಿದ್ದೀನಿ. ಮಾಸ್ಕ್ ಹಾಕದೆ ಇರುವುದು ತಪ್ಪು ನಿಜ. ಆದರೆ, 1 ಸಾವಿರ ಕೊಡಿ ಎಂದರೆ, ನನ್ನ ಬಳಿಯಿಲ್ಲ. ನನ್ನ ಬಳಿಯ ಎಲ್ಲ ತೆಂಗಿನ ಮಾರಾಟವಾದರೂ ಬರೀ 820 ರೂ. ಬರುತ್ತೇ. ಈಗ 152 ರೂ. ಇದೆ. ತೆಗೆದುಕೊಂಡು ಬಿಟ್ಟುಬಿಡಿ ಎಂದು ವ್ಯಾಪಾರಿ ಅನ್ವರ್ ಮಾರ್ಷಲ್ಗಳ ಬಳಿ ಮನವಿ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡಿತು. ಹೀಗೆ, ದಂಡ ಪಾವತಿಸಿ ಬಹುತೇಕರು ದುಬಾರಿ ದಂಡ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
1 ಸಾವಿರ ರೂ.ಗಳನ್ನು ದಂಡವನ್ನು ವಿಧಿಸಲು ಮಾರ್ಸಲ್ ಗಳನ್ನು ಕಳುಹಿಸಿ ವಸೂಲಿ ಮಾಡುತ್ತಿರುವುದು ಸ್ವಾಗತಾರ್ಹವಾದರೂ, ಮಾಸ್ಕ್ ಧರಿಸದೆ ಇರುವ ವ್ಯಕ್ತಿಗಳಿಗೆ 100 ರೂ. ದಂಡವನ್ನು ವಿಧಿಸಿ ಒಂದು ಮಾಸ್ಕನ್ನು ಉಚಿತವಾಗಿ ಕೊಡುವ ಯೋಜನೆ ಮಾಡಿದ್ದಲ್ಲಿ ಫಲಪ್ರದವಾಗುತ್ತದೆ.
-ಎಚ್.ಎಂ.ವೆಂಕಟೇಶ, ಸಾಮಾಜಿಕ ಹೋರಾಟಗಾರ
ಮಾಸ್ಕ್ ದಂಡ ವಸೂಲಿ ಎಷ್ಟು?
ಮಾಸ್ಕ್ ಹಾಗೂ ಸುರಕ್ಷಿತ ಅಂತರ ನಿಯಮ ಉಲ್ಲಂಘಿಸಿದ ಆರೋಪದಡಿ ಕಳೆದ ಶುಕ್ರವಾರ ಸುಮಾರು 2,788 ಮಂದಿಯಿಂದ 5.65 ಲಕ್ಷ ರೂ. ದಂಡ ವಸೂಲಿ ಮಾಡಲಾಗಿತ್ತು. ಆದರೆ, ಶನಿವಾರ ಮಾಸ್ಕ್ ಧರಿಸದ 412 ಮಂದಿಗೆ 3,68,567 ರೂ. ದಂಡ ವಿಧಿಸಲಾಗಿದೆ. ಇನ್ನು ಸುರಕ್ಷಿತ ಅಂತರ ನಿಯಮ ಉಲ್ಲಂಘಿಸಿದ 41 ಮಂದಿಗೆ 35,200 ರೂ. ದಂಡ ವಸೂಲಿ ಸೇರಿದಂತೆ ಒಟ್ಟು 453 ಮಂದಿಗೆ 4,03,767 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮೊಬೈಲ್ ಸಂಖ್ಯೆ ಪಡೆಯುತ್ತಿರುವ ಮಾರ್ಷಲ್
ದಂಡ ಪ್ರಮಾಣ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾರ್ಷಲ್ಗಳು ಕಂಡ ತಕ್ಷಣ ಮಾಸ್ಕ್ ಧರಿಸುತ್ತಿದ್ದಾರೆ. ಜತೆಗೆ ದಂಡಕ್ಕೆ ಹೆದರಿ ಮಾಸ್ಕ್ ಧರಿಸುವವರ ಸಂಖ್ಯೆ ಸಹ ಹೆಚ್ಚಾಗಿದೆ. ಕೆಲವರು ಮಾಸ್ಕ್ ಧರಿಸದಿದ್ದರೂ ದಂಡ ಪಾವತಿ ಮಾಡುತ್ತಿಲ್ಲ. ಹೀಗಾಗಿ, ದಂಡ ಮೊತ್ತ ತೆಗೆದುಕೊಂಡು ಬಂದು ಪಾವತಿ ಮಾಡುವಂತೆ ಎಚ್ಚರಿಕೆ ನೀಡಿ ಮೊಬೈಲ್ ಸಂಖ್ಯೆ ಪಡೆದು ಕಳಿಸುವ ದೃಶ್ಯಗಳು ಕಂಡು ಬರುತ್ತಿವೆ