ಕ್ರಿಕೆಟ್ ಬೆಟ್ಟಿಂಗ್ ಆರೋಪ: ನಾಲ್ವರು ಸಿಸಿಬಿ ಬಲೆಗೆ
ಬೆಂಗಳೂರು, ಅ.9: ಕ್ರಿಕೆಟ್ ಬೆಟ್ಟಿಂಗ್ ಜೂಜಾಟದಲ್ಲಿ ತೊಡಗಿದ್ದ ಆರೋಪದಡಿ ನಾಲ್ವರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 3 ಲಕ್ಷ ರೂ.ನಗದು ಮತ್ತು 4 ಮೊಬೈಲ್ಗಳನ್ನು ಜಪ್ತಿ ಮಾಡಿದ್ದಾರೆ.
ಕೆ.ಜಿ.ಹಳ್ಳಿಯ ಇಮ್ರಾನ್ ಪಾಷ(25), ಮುಹಮ್ಮದ್ ಇರ್ಫಾನ್(27), ಹೊಸಗುಡದಹಳ್ಳಿ ನೆಹರೂ ರಸ್ತೆಯ ಮುಝಾಮಿಲ್ ಅಹ್ಮದ್(21), ಸರ್ವಜ್ಞನಗರ ಹೆಣ್ಣೂರು ಕ್ರಾಸ್ ನಿವಾಸಿ ರಾಜ್(29) ಬಂಧಿತ ಆರೋಪಿಗಳೆಂದು ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಿಸಿದಂತೆ ಅ.7ರಂದು ಕೊಲ್ಕತ್ತಾ ಮತ್ತು ಚೆನ್ನೈ ತಂಡಗಳ ನಡುವಿನ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ಈ ತಂಡಗಳ ಸೋಲು ಮತ್ತು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಮೊಬೈಲ್ ಫೆÇೀನ್ ಮೂಲಕ ಬೆಟ್ಟಿಂಗ್ ಅನುಪಾತವನ್ನು ನೋಡಿಕೊಂಡು ಮೊಬೈಲ್ ಫೋನ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಳ್ಳಲಾಗಿತ್ತು.
ಕ್ರಿಕೆಟ್ ಬೆಟ್ಟಿಂಗ್ ಜೂಜಾಟ ಆಡಿಸುತ್ತಿರುವ ಒಬ್ಬ ವ್ಯಕ್ತಿ ಅ.8ರಂದು ಗೆದ್ದವರಿಗೆ ಹಣ ಕೊಡಲು ಮತ್ತು ಸೋತವರಿಂದ ಹಣ ಪಡೆಯಲು ಯಶವಂತಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಸೇರಿದ ಆರ್ಟಿಓ ಕಚೇರಿ ಮುಂದೆ ಬರುವುದಾಗಿ ಖಚಿತ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ದಾಳಿನ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿಗಳಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಸಂಬಂಧಿಸಿದ 3 ಲಕ್ಷ ರೂ. ನಗದು ಮತ್ತು 4 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.