ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಪ್ರಕರಣ: ಸಿಸಿಬಿ ವಿಚಾರಣೆಗೆ ನಟ ವಿವೇಕ್ ಪತ್ನಿ ಗೈರು
ಬೆಂಗಳೂರು, ಅ.16: ಸ್ಯಾಂಡಲ್ವುಡ್ ಡ್ರಗ್ಸ್ ದಂಧೆ ಆರೋಪ ಪ್ರಕರಣ ಸಂಬಂಧ ಬಾಲಿವುಡ್ ನಟ ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಆಳ್ವ ಸಿಸಿಬಿ ವಿಚಾರಣೆಗೆ ಗೈರಾಗಿದ್ದಾರೆ ಎಂದು ವರದಿಯಾಗಿದೆ.
ಡ್ರಗ್ಸ್ ಆರೋಪ ಸಂಬಂಧ ಆರೋಪಿಯೋರ್ವನ ಕುರಿತು ಮಾಹಿತಿ ಪಡೆಯುವ ಸಲುವಾಗಿ ಸಿಸಿಬಿ ಇತ್ತೀಚಿಗೆ ನೋಟಿಸ್ ನೀಡಿ, ಅ.16ರಂದು ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿತ್ತು.ಆದರೆ, ಪ್ರಿಯಾಂಕಾ ಆಳ್ವಾ ಗೈರು ಆಗಿದ್ದು, ತನಿಖಾಧಿಕಾರಿಗಳಿಗೂ ಯಾವುದೇ ಕಾರಣ ನೀಡಿಲ್ಲ ಎನ್ನಲಾಗಿದೆ.
ಇಲ್ಲಿನ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪ್ರಿಯಾಂಕಾ ಆಳ್ವಾ ಸಹೋದರ ಆದಿತ್ಯ ಆಳ್ವ 6ನೇ ಆರೋಪಿಯಾಗಿದ್ದು, ಡ್ರಗ್ಸ್ ದಂಧೆ ಆರೋಪ ಬೆಳಕಿಗೆ ಬಂದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದಾನೆ.
ಈ ಸಂಬಂಧ ಶೋಧ ಕಾರ್ಯ ಮುಂದುವರೆಸಿರುವ ಸಿಸಿಬಿ ಪೊಲೀಸರು, ಗುರುವಾರ ಏಕಾಏಕಿ ಮುಂಬೈನಲ್ಲಿರುವ ನಟ ವಿವೇಕ್ ಒಬೆರಾಯ್ ಮನೆ ಮೇಲೆ ದಾಳಿ ನಡೆಸಿ, ಆರೋಪಿಯ ಕುರಿತು ಮಾಹಿತಿ ಸಂಗ್ರಹಿಸಿದರು.
ತದನಂತರ, ವಿವೇಕ್ ಒಬೆರಾಯ್ ಪತ್ನಿ ಪ್ರಿಯಾಂಕಾ ಆಳ್ವಾ ಅವರಿಗೆ ನೋಟಿಸ್ ರವಾನಿಸಿ, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು. ಆದರೆ, ಅವರು ಗೈರಾಗಿದ್ದು, ಸಿಸಿಬಿ ಮುಂದಿನ ಕ್ರಮ ಕೈಗೊಳ್ಳಲು ಮುಂದಾಗಿದೆ ಎನ್ನಲಾಗಿದೆ.