ಎಂಜಿ-ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ನಿಷೇಧ

ಸಾಂದರ್ಭಿಕ ಚಿತ್ರ
ಬೆಂಗಳೂರು, ನ.12: ನಗರದ ಎಂಜಿ(ಮಹಾತ್ಮ ಗಾಂಧಿ) ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷಾಚರಣೆ ನೆಪದಲ್ಲಿ ಮೋಜು ಮಸ್ತಿ ಮಾಡಲು ಈ ಬಾರಿ ಸಂಪೂರ್ಣ ನಿಷೇಧ ಹೇರಲಾಗಿದೆ. ಈ ಬಗ್ಗೆ ಬಿಬಿಎಂಪಿ ತೀರ್ಮಾನ ಮಾಡಿದ್ದು, ಹೊಸ ವರ್ಷಾಚರಣೆ ವೇಳೆ ಕಿಕ್ಕಿರಿದು ಜನ ಸೇರುತ್ತಾರೆ. ಸುರಕ್ಷಿತ ಅಂತರ, ಮಾಸ್ಕ್ ಎಲ್ಲ ನಿಯಮಗಳನ್ನೂ ಪಾಲನೆ ಮಾಡುವುದು ಅಸಾಧ್ಯ. ಈ ಹಿನ್ನೆಲೆಯಲ್ಲಿ ಹೊಸ ವರ್ಷಾಚರಣೆಯನ್ನು ನಿಲ್ಲಿಸಲು ಪಾಲಿಕೆ ನಿರ್ಧಾರ ಮಾಡಿದೆ.
ಈ ಬಗ್ಗೆ ಸರಕಾರಕ್ಕೂ ಮನವಿ ಮಾಡಲು ಪಾಲಿಕೆ ನಿರ್ಧರಿಸಿದೆ. ಸಾವಿರಾರು ಜನರು ಒಂದೇ ಕಡೆ ಸೇರಿ ಸಂಭ್ರಮಾಚರಣೆ ಮಾಡಿದರೆ ಮತ್ತೆ ಕೊರೋನ ಹೆಚ್ಚಾಗುವ ಸಾಧ್ಯತೆ ಇರುವುದರಿಂದ 2021ರ ಸಂಭ್ರಮಾಚರಣೆಗೆ ನಿಷೇಧ ಹೇರಲು ನಿರ್ಧರಿಸಲಾಗಿದೆ.
ಇನ್ನು, ದೀಪಾವಳಿ ವೇಳೆ ಬೆಂಗಳೂರಿನಲ್ಲಿ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂಥ್ಗೆ ಈ ಬಗ್ಗೆ ವರದಿ ಕೊಟ್ಟಿದ್ದೇವೆ. ಎಲ್ಲರಿಗೂ ಹಸಿರು ಪಟಾಕಿ ಮಾರಲು ಅವಕಾಶ ಇಲ್ಲ. ಕೆಲವು ಅಧಿಕೃತ ಮಾರಾಟಗಾರರಿಗೆ ಮಾತ್ರ ಅನುಮತಿ ನೀಡಲಾಗಿದೆ.
ಎಲ್ಲಾ ಕಡೆ ಹಸಿರು ಪಟಾಕಿ ಮಾರಾಟ ಮಾಡುವ ಹಾಗಿಲ್ಲ. ಎಲ್ಲೆಲ್ಲಿ ಮಾರಾಟ ಮಾಡಬೇಕು ಎಂಬುದನ್ನು ನಾವು ನಿರ್ಧರಿಸುತ್ತೇವೆ. ಈ ಬಗ್ಗೆ ಕೆಲವು ಜಾಗವನ್ನು ಸೂಚಿಸಿ ಪೊಲೀಸ್ ಆಯುಕ್ತರಿಗೆ ವರದಿ ಒಪ್ಪಿಸಿದ್ದೇವೆ. ಮುಂದಿನದ್ದನ್ನು ಅವರೇ ನೋಡಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.







