ಕನ್ನಡದ ಹಿರಿಯ ನಟ ಶಿವರಾಂ ಆಸ್ಪತ್ರೆಗೆ ದಾಖಲು
ಫೈಲ್ ಚಿತ್ರ (ನಟ ಶಿವರಾಂ)
ಬೆಂಗಳೂರು, ಡಿ.2: ಕನ್ನಡ ಚಿತ್ರರಂಗದ ಹಿರಿಯನಟ, ನಿರ್ದೇಶಕ, ನಿರ್ಮಾಪಕ ಶಿವರಾಂ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಗುರುವಾರ ಈ ಕುರಿತು ಮಾಹಿತಿ ನೀಡಿದ ಅವರ ಪುತ್ರ ಲಕ್ಷ್ಮೀಶ, ಮನೆಯಲ್ಲಿ ಪೂಜೆ ಮಾಡುವ ಸಂದರ್ಭದಲ್ಲಿ ಅವರು ತಲೆ ಸುತ್ತಿ ಬಿದ್ದಿದ್ದು, ಸಣ್ಣ ಗಾಯವಾಗಿದೆ. ಕೂಡಲೇ ಸೀತಾ ಸರ್ಕಲ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.
ಹಿರಿಯ ವೈದ್ಯ ಡಾ.ಮೋಹನ್ ಮಾತನಾಡಿ, ಮಂಗಳವಾರ ಅಯ್ಯಪ್ಪ ಸ್ವಾಮಿ ಪೂಜೆ ಸಂದರ್ಭದಲ್ಲಿ ಬಿದ್ದಿದ್ದಾರೆ. ಬಳಿಕ ಅವರ ಉಸಿರಾಟಕ್ಕೆ ತೊಂದರೆಯಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಅವರಿಗೆ ಪ್ರಜ್ಞೆ ಇರಲಿಲ್ಲ. ಮೆದುಳು ನಿಷ್ಕ್ರಿಯ ಆಗಿತ್ತು. ಇದೀಗ ಚಿಕಿತ್ಸೆಗೆ ಸ್ಪಂದಿಸಿದರೆ ನಾವೇನಾದರೂ ಮಾಡಬಹುದು ಎಂದರು.
ಸದ್ಯ ಖಾಸಗಿ ಆಸ್ಪತ್ರೆಯ ಐಸಿಯುನಲ್ಲೇ ಶಿವರಾಂ ಅವರಿಗೆ ಚಿಕಿತ್ಸೆ ಮುಂದುವರೆದಿದೆ. ಶಿವರಾಂ ಅವರಿಗೆ ಅನಾರೋಗ್ಯ ಉಂಟಾಗಿರುವ ವಿಚಾರ ತಿಳಿದ ಕೂಡಲೆ ಹಿರಿಯ ಕಲಾವಿದರಾದ ದೊಡ್ಡಣ್ಣ, ಗಿರಿಜಾ ಲೋಕೇಶ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದರು.
ಶಿವರಾಂ ಅವರಿಗೆ 83 ವರ್ಷ ವಯಸ್ಸಾಗಿದ್ದು, ಶುಭಮಂಗಳ, ನಾಗರಹಾವು ಮುಂತಾದ ಚಿತ್ರಗಳ ಮೂಲಕ ಖ್ಯಾತಿ ಗಳಿಸಿದ್ದರು.