ಬೆಂಗಳೂರು: ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗಲೇ ಕುಸಿದು ಬಿದ್ದು ಮಂಗಳೂರು ಮೂಲದ ಮಹಿಳೆ ಮೃತ್ಯು
ಬೆಂಗಳೂರು, ಮಾ.26: ಜಿಮ್ನಲ್ಲಿ ವರ್ಕೌಟ್ ಮಾಡುವಾಗ ಮಹಿಳೆಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಮಲ್ಲೇಶಪಾಳ್ಯದಲ್ಲಿ ನಡೆದಿದೆ.
ಮೃತಳನ್ನು ವಿನಯಕುಮಾರಿ(44) ಎಂದು ಗುರುತಿಸಲಾಗಿದೆ. ಪ್ರತಿದಿನದಂತೆ ಶನಿವಾರವೂ ವಿನಯಕುಮಾರಿ ಮಲ್ಲೇಶಪಾಳ್ಯದಲ್ಲಿರುವ ಜಿಮ್ ಸೆಂಟರ್ಗೆ ತೆರಳಿದ್ದಾರೆ.
ಈ ವೇಳೆ ಜಿಮ್ನಲ್ಲಿ ವರ್ಕೌಟ್ ಮಾಡುತ್ತಿರುವಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಪಟ್ಟರೂ, ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ಮೃತ ವಿನಯಕುಮಾರಿ ಮೂಲತಃ ಮಂಗಳೂರು ನಿವಾಸಿಯಾಗಿದ್ದು, ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಲ್ಲೇಶಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು ಎಂದು ತಿಳಿದು ಬಂದಿದೆ.
ಮೃತದೇಹವನ್ನು ಸಿ.ವಿ.ರಾಮನ್ ನಗರ ಆಸ್ಪತ್ರೆಗೆ ರವಾನಿಸಲಾಗಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
Next Story