"ಹೆಣ್ಣಿನ ಸಹವಾಸದಿಂದ ಮೋಸ ಹೋದೆ": ಆತ್ಮಹತ್ಯೆಗೈದಿದ್ದ ಬಿಜೆಪಿ ಮುಖಂಡನ ಡೆತ್ ನೋಟ್
ಅನಂತರಾಜು
ಬೆಂಗಳೂರು, ಮೇ 16: ಇತ್ತೀಚಿಗೆ ಆತ್ಮಹತ್ಯೆಗೆ ಶರಣಾಗಿದ್ದ ಬಿಜೆಪಿ ನಾಯಕ ಅನಂತರಾಜು ಅವರ ಡೇತ್ನೋಟ್ ಪತ್ತೆಯಾಗಿದ್ದು, ಇದರಲ್ಲಿ ಹೆಣ್ಣಿನ ಸಹವಾಸದಿಂದ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.
ನಗರದ ಹೇರೋಹಳ್ಳಿ ವಾರ್ಡಿನ ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆಗೂ ಮುನ್ನ ಬರೆದಿರುವ ಡೇತ್ ನೋಟ್ನಲ್ಲಿ ಆತ್ಮಹತ್ಯೆಗೆ ಕಾರಣವನ್ನು ಬಹಿರಂಗಪಡಿಸಿದ್ದು, ಒಂದು ಹೆಣ್ಣಿನ ಸಹವಾಸ ಮಾಡಿ ಆಕೆಯಿಂದ ಫೋಟೋ, ವೀಡಿಯೋಗಳ ಟ್ರ್ಯಾಪ್ಗೆ ಸಿಲುಕಿದ್ದೇನೆ. ಹೀಗಾಗಿ, ನಿನಗೆ ಮೋಸ ಮಾಡಿದ್ದೇನೆ. ನಿನ್ನಲ್ಲಿ ಕ್ಷಮೆ ಕೇಳಲು ನಾನು ಅರ್ಹನಲ್ಲ ಎಂದು ಪತ್ನಿಯನ್ನು ಉಲ್ಲೇಖಿಸಿ ಡೆತ್ ನೋಟ್ ಬರೆದಿದ್ದಾರೆ ಎನ್ನಲಾಗಿದೆ.
ಅನಂತರಾಜು ಮೇ 12ರಂದು ಬ್ಯಾಡರಹಳ್ಳಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆಗೂ ಮುನ್ನ ಡೇತ್ ನೋಟ್ನಲ್ಲಿ ರೇಖಾ, ವಿನೋದ್, ಸ್ಪಂದನಾ ಎಂಬುವರಿಂದ ಹನಿಟ್ರ್ಯಾಪ್ಗೆ ಒಳಗಾಗಿದ್ದೇನೆ ಎಂದು ಆರೋಪಿಸಿದ್ದರು. ಅಲ್ಲದೆ, ಎರಡು ಬಾರಿ ಬಿಬಿಎಂಪಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ ಅನಂತರಾಜು ಈ ಬಾರಿ ಬಿಬಿಎಂಪಿ ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದರು. ಈ ಬಗ್ಗೆ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.