ಉಚಿತ ಆರೋಗ್ಯ ಮೇಳಗಳ ಉಪಯೋಗ ಪಡೆಯಲು ಸಚಿವ ಕೆ.ಗೋಪಾಲಯ್ಯ ಕರೆ
ಬೆಂಗಳೂರು: ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆಯೋಜನೆ ಮಾಡುತ್ತಿರುವ ಉಚಿತ ಆರೋಗ್ಯ ತಪಾಸಣಾ ಶಿಬಿರಗಳ ಉಪಯೋಗವನ್ನು ಪ್ರತಿಯೊಬ್ಬರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಕರೆ ನೀಡಿದರು.
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕಮಲಾ ನಗರದ ಮಟ್ಕಳಮ್ಮ ದೇವಿ ದೇವಸ್ಥಾನದ ಅಂಬೇಡ್ಕರ್ ಭವನದಲ್ಲಿ ಮಹಾಲಕ್ಷ್ಮಿ ಎಜುಕೇಷನ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಉಚಿತ ಆರೋಗ್ಯ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರದ ಜನರ ಆರೋಗ್ಯ ಮತ್ತು ಮಕ್ಕಳ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಲಾಗಿದೆ. ನೀವಷ್ಟೇ ಅಲ್ಲದೆ ದೂರದ ಊರಿನಲ್ಲಿರುವ ನಿಮ್ಮ ಬಂಧುಗಳು, ಸ್ನೇಹಿತರು, ಹಿತೈಷಿಗಳಿಗೂ ಇಂಥಹ ಶಿಬಿರಗಳ ಬಗ್ಗೆ ತಿಳಿಸಿ ಅವರು ಕೂಡ ಇದರ ಉಪಯೋಗಪಡೆಯಲು ಸಹಕಾರ ನೀಡಿ ಎಂದರು.
ಕಣ್ಣು, ಹೃದಯ, ಶ್ವಾಸಕೋಶ, ಗರ್ಭಕೋಶ, ರಕ್ತದೊತ್ತಡ, ಸಕ್ಕರೆ ಖಾಯಿಲೆಗಳಿಗೆ ಉಚಿತ ತಪಾಸಣೆ ಮತ್ತು ಔಷಧಿಗಳನ್ನು ನೀಡಲಾಗುತ್ತಿದೆ. ಕಣ್ಣಿನ ತೊಂದರೆ ಇರುವವರಿಗೆ ಶಸ್ತ್ರಚಿಕಿತ್ಸೆ ಮಾಡಿ ಕನ್ನಡಕಗಳನ್ನೂ ಕೂಡ ನೀಡಲಾಗುವುದು ಎಂದರು.
ಕ್ಷೇತ್ರದ ಜನರ ಉತ್ತಮ ಆರೋಗ್ಯಕ್ಕಾಗಿ ಪ್ರತಿ ತಿಂಗಳು ಕ್ಷೇತ್ರದ ಹಲವೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಿ ಔಷಧಿಗಳನ್ನು ನೀಡಲಾಗುತ್ತಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯ ಇರುವವರಿಗೆ ಇತರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಅನುಕೂಲ ಮಾಡಿಕೊಡಲಾಗುತ್ತಿದ್ದು, ಪ್ರತಿಯೊಬ್ಬರೂ ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಹೇಮಲತಾ ಕೆ.ಗೋಪಾಲಯ್ಯ, ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಜಯರಾಮಯ್ಯ, ಜಯಸಿಂಹ, ಬಿಬಿಎಂಪಿ ಮಾಜಿ ಸದಸ್ಯೆ ಪದ್ಮಾವತಿ ಶ್ರೀನಿವಾಸ್, ವಾರ್ಡ್ ಅಧ್ಯಕ್ಷ ಬಿ.ಟಿ.ಶ್ರೀನಿವಾಸ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.