ಬೆಂಗಳೂರು: ಪ್ರತಿಷ್ಠಿತ ಕಂಪೆನಿಗಳ ನಕಲಿ ಬ್ಯಾಗ್ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಸಿಸಿಬಿ ದಾಳಿ
ಬೆಂಗಳೂರು, ಸೆ.9: ಸ್ಕೈ ಬ್ಯಾಗ್, ಲೂಯಿಸ್ ಕಂಪೆನಿಯ ನಕಲಿ ಬ್ಯಾಗ್ ಹಾಗೂ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ 5 ಅಂಗಡಿಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 8 ಲಕ್ಷ ಮೌಲ್ಯದ ನಕಲಿ ಉತ್ಪನ್ನಗಳನ್ನು ಜಪ್ತಿ ಮಾಡಿದ್ದಾರೆ.
ಸಿಟಿ ಮಾರುಕಟ್ಟೆಯ ಭವಾನಿ ಬ್ಯಾಗ್ಸ್, ನಂದಿ ಬೆಲ್ಟ್, ಎಂಪಿ ಎಂಟರ್ಪ್ರೈಸಸ್, ಪ್ರವೀಣ್ ನಾವೆಲ್ಟೀಸ್ ಹಾಗೂ ಉಪ್ಪಾರಪೇಟೆಯ ಅಕ್ಷಯ್ ಬ್ಯಾಗ್ಸ್ ಅಂಗಡಿಗಳ ಮೇಲೆ ದಾಳಿ ನಡೆಸಿ ನಕಲಿ ಉತ್ಪನ್ನಗಳನ್ನು ಪತ್ತೆ ಮಾಡಲಾಗಿದೆ.
ಅಂಗಡಿಗಳಲ್ಲಿ ಅಕ್ರಮವಾಗಿ ಮಾರಾಟಕ್ಕೆ ಇಟ್ಟುಕೊಂಡ ಸ್ಕೈ ಬ್ಯಾಗ್ನ 714 ನಕಲಿ ಬ್ಯಾಗ್ಗಳು, ಲೂಯಿಸ್ ಕಂಪೆನಿಯ 131 ಬ್ಯಾಗ್ಗಳನ್ನು ವಶಪಡಿಸಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ.
ಸಿಟಿ ಮಾರುಕಟ್ಟೆಯಲ್ಲಿ 4 ಹಾಗೂ ಉಪ್ಪಾರಪೇಟೆಯಲ್ಲಿ 1 ಪ್ರಕರಣ ದಾಖಲಿಸಿ ಅಂಗಡಿ ಮಾಲಕರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ ಎಂದು ಸಿಸಿಬಿ ತಿಳಿಸಿದೆ.
Next Story