ಭಾರತ್ ಜೋಡೊ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಭಾಗಿ: ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ಏನು?

ಬೆಂಗಳೂರು: 2 ದಿನ ವಿಶ್ರಾಂತಿ ಬಳಿಕ ಕರ್ನಾಟಕದಲ್ಲಿ 5ನೇ ದಿನದ ಭಾರತ್ ಜೋಡೊ ಯಾತ್ರೆ ಮಂಡ್ಯ ಜಿಲ್ಲೆಯ ಬೆಳ್ಳಾಳೆಯಿಂದ ಮತ್ತೆ ಇಂದಿನಿಂದ ಆರಂಭಗೊಂಡಿದ್ದು, ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಕೆಲಹೊತ್ತು ಹೆಜ್ಜೆ ಹಾಕಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ''ಸಹಜವಾಗಿ ಎಲ್ಲಾ ಪಕ್ಷದ ಮುಖ್ಯಸ್ಥರು ತಮ್ಮ ಪಕ್ಷಕ್ಕೆ ಕೆಲಸ ಮಾಡುತ್ತಾರೆ. ಸೋನಿಯಾ ಗಾಂಧಿ ಅರ್ಧ ಕಿ.ಮೀ ನಡೆಯು ವಾಪಸ್ಸಾಗಿದ್ದಾರೆ. ಇದ್ಯಾವುದೂ ಪರಿಣಾಮವನ್ನು ಬೀರುವುದಿಲ್ಲ ಎಂದರು. ಪ್ರಿಯಾಂಕಾ ಗಾಂಧಿ ಅಭಿಯಾನದಲ್ಲಿ ಪಾಲ್ಗೊಳ್ಳುವುದಕ್ಕೂ ನಮಗೂ ಸಂಬಂಧ ಇಲ್ಲ, ಇದರಿಂದ ಯಾವ ಪರಿಣಾಮವೂ ಆಗುವುದಿಲ್ಲ'' ಎಂದು ಹೇಳಿದ್ದಾರೆ.
ಆರು ರ‍್ಯಾಲಿಗಳು: ಭಾರತ್ ಜೋಡೋ ಅಭಿಯಾನಕ್ಕೂ ಮುನ್ನವೇ ತೀರ್ಮಾನಿಸಿದಂತೆ ಬಿಜೆಪಿ ಆರು ರ‍್ಯಾಲಿಗಳನ್ನು ಕೈಗೊಳ್ಳಲಿದೆ. ಮಧ್ಯೆ ಅಧಿವೇಶನ ಹಾಗೂ ದಸರಾ ಇದ್ದುದರಿಂದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಜಂಟಿ ಪ್ರವಾಸವನ್ನು ಪ್ರಾರಂಭ ಮಾಡಲಿದ್ದೇವೆ ಎಂದರು.
ಪೊಲೀಸ್ ಹಲ್ಲೆ ಕುರಿತು ಪರಿಶೀಲನೆ: ಮಂಡ್ಯದಲ್ಲಿ ಪೊಲೀಸ್ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿ ಯಾರ ತಪ್ಪಿದೆ ಎಂದು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ: ಭಾರತ್ ಜೋಡೊ ಯಾತ್ರೆ; ಸೋನಿಯಾ ಗಾಂಧಿಯ ಶೂಲೇಸ್‌ಗಳನ್ನು ಕಟ್ಟುತ್ತಿರುವ ರಾಹುಲ್ ಗಾಂಧಿ ಫೋಟೋ ವೈರಲ್







