ಹಣ ಗಳಿಕೆ ಬಗ್ಗೆ ಜಾಹೀರಾತು ನೀಡಿ ವಂಚಿಸಿದ ಆರೋಪ: ಬೆಂಗಳೂರಿನ 16 ಕಡೆ ಈಡಿ ದಾಳಿ, 1 ಕೋಟಿ ರೂ.ಜಪ್ತಿ
ಬೆಂಗಳೂರು, ನ.17: ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಕೆ ಮಾಡಬಹುದು ಎಂದು ಜಾಹೀರಾತು ನೀಡಿ ವಂಚಿಸಿದ ಆರೋಪದ ಮೇಲೆ ಸೂಪರ್ ಲೈಕ್ ಆನ್ಲೈನ್ ಅರ್ನಿಂಗ್ಸ್ ಅಪ್ಲಿಕೇಷನ್ ಕಂಪೆನಿಗೆ ಸಂಬಂಧಿಸಿದ ಬೆಂಗಳೂರಿನ 16 ಕಡೆಗಳಲ್ಲಿ ಜಾರಿ ನಿರ್ದೇಶನಾಲಯ(ಈಡಿ) ಅಧಿಕಾರಿಗಳು ದಾಳಿ ನಡೆಸಿ 1 ಕೋಟಿ ರೂ.ಹಣ ಜಪ್ತಿ ಮಾಡಿದ್ದಾರೆ.
ಹೆಚ್ಚು ಹಣ ನೀಡುವ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ಹಣ ವಂಚಿಸಿದ್ದ ಆರೋಪದಡಿ ಈ ಹಿಂದೆ ದಕ್ಷಿಣ ವಿಭಾಗದ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯಲ್ಲಿ ಕೋಟ್ಯಂತರ ರೂಪಾಯಿ ಹಣ ಅಕ್ರಮವಾಗಿ ವರ್ಗಾವಣೆ ಕಂಡುಬಂದಿದ್ದರಿಂದ ಸೆನ್ ಪೊಲೀಸರು ಈಡಿಗೆ ಪತ್ರ ಬರೆದಿದ್ದರು.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಈ.ಡಿ ಅಧಿಕಾರಿಗಳು, ಕಂಪೆನಿಗೆ ಸೇರಿದ 16 ಕಡೆಗಳಲ್ಲಿ ದಾಳಿ ನಡೆಸಿ ಕಂಪೆನಿ ಹೆಸರಿನಲ್ಲಿದ್ದ 80 ಬ್ಯಾಂಕ್ ಅಕೌಂಟ್ಗಳನ್ನ ಸೀಜ್ ಮಾಡಿ 1 ಕೋಟಿ ರೂಪಾಯಿ ವಶಕ್ಕೆ ಪಡೆದುಕೊಂಡಿದ್ದಾರೆ.
ಸೂಪರ್ ಲೈಕ್ ಆ್ಯಪ್ನಲ್ಲಿ ಹಣ ಹೂಡುವಂತೆ ಪ್ರಚೋದಿಸುತ್ತಿದ್ದ ಕಂಪೆನಿಯು ಸಾರ್ವಜನಿಕರಲ್ಲಿ ನಂಬಿಕೆ ಹುಟ್ಟಿಸಲು ಸಿನೆಮಾ ತಾರೆಯರು ಹಾಗೂ ಹೆಸರಾಂತ ವ್ಯಕ್ತಿಗಳಿಂದ ಪೇಡ್ ವಿಡಿಯೋ ಮಾಡಿಸಿ ಹರಿಬಿಡುತ್ತಿದ್ದರು. ಇದನ್ನು ನಂಬಿ ಮೊದಲ ಬಾರಿ ಹಣ ಹೂಡುತ್ತಿದ್ದವರಿಗೆ ಭರವಸೆ ನೀಡಿದಂತೆ ಲಾಭಾಂಶದ ಹಣ ನೀಡುತ್ತಿದ್ದರು. ಇದನ್ನು ನಂಬಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹಣ ಹೂಡುತ್ತಿದ್ದರು. ಹಣ ವರ್ಗಾವಣೆ ಜಾಲದ ಹಿಂದೆ ಹಣಕಾಸು ಸಂಸ್ಥೆಗಳ ಪಾತ್ರದ ಬಗ್ಗೆ ಶಂಕಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಕೈಗೊಂಡಿರುವುದಾಗಿ ಈಡಿ ಅಧಿಕಾರಿಗಳು ತಿಳಿಸಿದ್ದಾರೆ.