ಬೆಂಗಳೂರು ಟರ್ಫ್ ಕ್ಲಬ್ನ ಮಾಜಿ ಅಧ್ಯಕ್ಷರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪ್ರಕರಣ ದಾಖಲು
ಬೆಂಗಳೂರು, ಡಿ.27: ಬೆಂಗಳೂರು ಟರ್ಫ್ ಕ್ಲಬ್ನ ಮಾಜಿ ಅಧ್ಯಕ್ಷ ಹರೀಂದರ್ ಶೆಟ್ಟಿ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ನಗರದ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸದ್ಯ ಬಾಣಸವಾಡಿ-ಹೆಣ್ಣೂರು ಕಾಸ್ಮೋಪಾಲಿಟನ್ ಕ್ಲಬ್ನ ಕಾರ್ಯದರ್ಶಿಯಾಗಿರುವ ಹರೀಂದರ್ ಶೆಟ್ಟಿ ವಿರುದ್ಧ ಅದೇ ಕ್ಲಬ್ನ ಮಹಿಳಾ ಘಟಕದ ಸದಸ್ಯೆಯೊಬ್ಬರು ದೂರು ದಾಖಲಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ದೂರುದಾರ ಮಹಿಳೆಯನ್ನು ಕ್ಲಬ್ನ ತಮ್ಮ ಕೊಠಡಿಗೆ ಕರೆಸಿದ್ದ ಹರೀಂದರ್ ಶೆಟ್ಟಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಅಲ್ಲದೇ, ದೂರುದಾರ ಮಹಿಳೆಯೊಂದಿಗೆ ಸಲುಗೆ ಬೆಳೆಸಲು ಕಳೆದ ಜುಲೈನಿಂದ ನಿರಂತರವಾಗಿ ಕರೆ ಮಾಡಿ, ಸಂದೇಶ ರವಾನಿಸಿ ಬೇರೆ ಬೇರೆ ಕ್ಲಬ್ಗಳಿಗೆ ಅನಗತ್ಯವಾಗಿ ಆಹ್ವಾನಿಸಿರುವ ಆರೋಪ ಕೇಳಿ ಬಂದಿದೆ. ಒಪ್ಪದಿದ್ದಾಗ ಮನೆ ಬಳಿ ಸಂಘಟನೆಯವರನ್ನು ಕಳಿಸಿ ಗಲಾಟೆ ಮಾಡುವುದಾಗಿ ಬೆದರಿಸಿದ್ದಾರೆ ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಈ ಹಿಂದೆ ಬೆಂಗಳೂರು ಟರ್ಫ್ ಕ್ಲಬ್ನ ಅಧ್ಯಕ್ಷರಾಗಿದ್ದ ಹರೀಂದರ್ ಶೆಟ್ಟಿಗೆ 2017ರಲ್ಲಿ ಕ್ಲಬ್ನಲ್ಲಿ ಅವ್ಯವಹಾರದ ಆರೋಪದಡಿ ಅಧ್ಯಕ್ಷ ಸ್ಥಾನದಿಂದ ಗೇಟ್ ಪಾಸ್ ನೀಡಲಾಗಿತ್ತು. ಸದ್ಯ ಆರೋಪಿ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ.