ಶೇ.90ರಷ್ಟು ಮೀಸಲಾತಿ ಸ್ಪೃಶ್ಯ ಸಮುದಾಯಗಳ ಪಾಲು: ಬಿ.ಆರ್.ಭಾಸ್ಕರ್ ಪ್ರಸಾದ್ ಆರೋಪ
ಸದಾಶಿವ ಆಯೋಗ ವರದಿ ಶಿಫಾರಸ್ಸಿಗೆ ಎಸ್‍ಡಿಪಿಐ ಒತ್ತಾಯ

ಬೆಂಗಳೂರು, ಡಿ.27: ಇತರೆ ರಾಜ್ಯಗಳಲ್ಲಿ ಸ್ಪೃಶ್ಯ ಸಮುದಾಯಗಳನ್ನು ಪರಿಶಿಷ್ಟ ಜಾತಿಯೊಂದಿಗೆ ಸೇರಿಸಲಾಗಿಲ್ಲ. ಆದರೆ ಕರ್ನಾಟಕದಲ್ಲಿ ಮಾತ್ರ ಸ್ಪೃಶ್ಯ ಸಮುದಾಯಗಳನ್ನು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಸೇರಿಸಲಾಗಿದ್ದು, ಇದರಿಂದ ಮೀಸಲಾತಿ ಸೌಲಭ್ಯ ಮತ್ತು ಅಧಿಕಾರ ಶೇ.90ಕಿಂತ ಹೆಚ್ಚು ಸ್ಪೃಶ್ಯ ಸಮುದಾಯಗಳ ಪಾಲಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್.ಭಾಸ್ಕರ್ ಪ್ರಸಾದ್ ಆರೋಪಿಸಿದ್ದಾರೆ.
ಮಂಗಳವಾರ ನಗರದ ಹಮೀದ್ ಶಾ ಕಾಂಪ್ಲೆಕ್ಸ್‍ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಪøಶ್ಯ ಸಮುದಾಯಗಳಾದ ಭೋವಿ, ಲಮಾಣಿ, ಕೊರಮ, ಕೊರಚ ಮುಂತಾದ ಸಮುದಾಯಗಳನ್ನು ಪರಿಶಿಷ್ಟ ಜಾತಿಗೆ ಸೇರಿಸಿರುವುದರಿಂದ ಅಸ್ಪೃಶ್ಯ ಸಮುದಾಯಗಳಿಗೆ ಮೀಸಲಾತಿಯ ಪಾಲುದಾರಿಕೆಯಲ್ಲಿ ಅನ್ಯಾಯವಾಗುತ್ತಿದೆ. ಈ ಕುರಿತು ಅಸ್ಪೃಶ್ಯ ಸಮುದಾಯಗಳ ಆರೋಪದಲ್ಲಿ ಸತ್ವವಿದೆ. ಸೃಶ್ಯ ಸಮುದಾಯಗಳನ್ನು ಸಮಾಜ ಮುಟ್ಟಿಸಿಕೊಳ್ಳುತ್ತದೆ. ಆದರೆ ಅಸ್ಪೃಶ್ಯ ಸಮುದಾಯಗಳನ್ನು ಸಮಾಜ ಎಲ್ಲ ರೀತಿಯಿಂದಲೂ ದೂರ ಇಡುತ್ತದೆ. ಈ ರೀತಿಯ ತಾರತಮ್ಯ ನೀತಿ ಖಂಡನೀಯ ಎಂದು ತಿಳಿಸಿದರು.
ಮಾದಿಗ ಸಮುದಾಯಕ್ಕೆ ಸಂಬಂಧಿಸಿದ ಸುಮಾರು 53 ಜಾತಿಗಳು ಮತ್ತು ಹೊಲೆಯ ಸಮುದಾಯದ ಸುಮಾರು 29 ಜಾತಿಗಳು ಸೇರಿ ಸುಮಾರು 90ಕ್ಕಿಂತಲೂ ಹೆಚ್ಚು ಜಾತಿಗಳು ಒಳಮೀಸಲಾತಿಯ ಪರವಾಗಿ ಧ್ವನಿಯಾಗುತ್ತಿವೆ. ಇದರ ವಿರುದ್ಧವಾಗಿ ಕೊರಮ, ಕೊರಚ, ಬೋವಿ, ಲಮಾಣಿ ಸಮುದಾಯಗಳು ಒಳಮೀಸಲಾತಿ ಜಾರಿಯಾಗಬಾರದು ಎಂಬ ಬೇಡಿಕೆಯೊಂದಿಗೆ ಜ.10 ರಂದು ಹೋರಾಟಕ್ಕೆ ಮುಂದಾಗಿದ್ದಾರೆ. ಇದು ಸರಿಯಾದ ನಡೆಯಲ್ಲ ಎಂದು ಭಾಸ್ಕರ್ ಪ್ರಸಾದ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಒಳಮೀಸಲಾತಿಯನ್ನು ಜಾರಿ ಮಾಡುವುದಾಗಿ ಹೇಳುತ್ತಲೇ ಅದನ್ನು ಅನುμÁ್ಠನಗೊಳಿಸದೆ ಅಸ ಶ್ಯ ಸಮುದಾಯಕ್ಕೆ ಮೋಸ ಮಾಡಿಕೊಂಡು ಬಂದಿವೆ. ಕಳೆದ ಬಾರಿ ಕಾಂಗ್ರೆಸ್ ಸರಕಾರ ಒಳಮೀಸಲಾತಿಯನ್ನು ಜಾರಿ ಮಾಡುತ್ತೇವೆ ಎಂದು ಹೇಳಿ ಮೋಸ ಮಾಡಿತು. ಈ ಕಾರಣದಿಂದ ಕಾಂಗ್ರೆಸ್ 2018ರ ವಿಧಾನಸಭಾ ಚುನಾವಣೆಯಲ್ಲಿ ಅದರ ಪ್ರತಿಫಲವನ್ನೂ ಅನುಭವಿಸಿತು. ಈಗಿರುವ ಬಿಜೆಪಿಯು ಕೂಡ ಒಳಮೀಸಲಾತಿ ಜಾರಿಯ ಕುರಿತು ಪರಿಶೀಲಿಸುವ ನಾಟಕವಾಡಿ ಸಂಪುಟ ದರ್ಜೆಯ ಉಪಸಮಿತಿಯನ್ನು ರಚಿಸಿತು. ಉಪಸಮಿತಿಯ ಅಧ್ಯಕ್ಷರಾದ ಸಚಿವ ಮಾಧುಸ್ವಾಮಿ, ಒಳಮೀಸಲಾತಿಯ ಸದಾಶಿವ ಆಯೋಗ ಜಾರಿಗೂ ಈ ಉಪಸಮಿತಿಗೂ ಯಾವುದೇ ಸಂಬಂಧವಿಲ್ಲ. ಅದರ ಜಾರಿಯ ಬಗ್ಗೆ ನಾವು ಯಾವುದೇ ಅಧ್ಯಯನ ಮಾಡುತ್ತಿಲ್ಲ. ನಾವು ಒಳಮಿಸಲಾತಿಯನ್ನು ಬೇರೊಂದು ಆಯಾಮದಲ್ಲಿ ಜಾರಿಗೊಳಿಸುವುದು ಹೇಗೆ ಅನ್ನುವ ವಿಚಾರದಲ್ಲಿ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಿಜೆಪಿಯ ನಾಟಕವನ್ನು ಬಹಿರಂಗಪಡಿಸುತ್ತದೆ ಎಂದರು.
ಮಾದಿಗ ಮತ್ತು ಹೊಲೆಯ ಸಮುದಾಯಗಳು ಒಳಮೀಸಲಾತಿ ಜಾರಿಗಾಗಿ ದೊಡ್ಡಮಟ್ಟದ ಹೋರಾಟಕ್ಕೆ ಮುಂದಾಗಲಿವೆ ಎನ್ನುವುದನ್ನು ಅರಿತಿರುವ ಬಿಜೆಪಿ ಸರಕಾರ ಅದರಿಂದ ತಪ್ಪಿಸಿಕೊಳ್ಳಲು ಉಪಾಯ ಮಾಡಿಕೊಂಡಿದೆ. ಬಿಜೆಪಿಯ ಕೆಲವು ಪರಿಶಿಷ್ಟ ಜಾತಿ ಸಮುದಾಯದ ಮಠಾಧೀಶರು ಮತ್ತು ರಾಜಕೀಯ ನಾಯಕರನ್ನು ಬಳಸಿಕೊಂಡು ಒಳಮೀಸಲಾತಿ ಸಾಧಕ ಬಾಧಕಗಳ ಚರ್ಚೆ ಮಾಡುವ ಮೂಲಕ ಈ ಹೋರಾಟವನ್ನು ಹತ್ತಿಕ್ಕುವ ಷಡ್ಯಂತ್ರವನ್ನು ಮಾಡುತ್ತಿದ್ದಾರೆ. ಈ ಮೂಲಕ ಸಮುದಾಯಗಳ ಮತಗಳನ್ನು ಸೆಳೆಯುವಂತಹ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಬೆಳಗಾವಿಯ ಅಧಿವೇಶನ ಮುಗಿಯುವುದರೊಳಗಾಗಿ ಸದಾಶಿವ ಆಯೋಗದ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಮತ್ತು ಕೇಂದ್ರ ಸರಕಾರ ತಕ್ಷಣ ಅನುಮೋದನೆಯನ್ನು ನೀಡಬೇಕು ಎಂದು ಎಸ್‍ಡಿಪಿಐ ಪಕ್ಷ ಒತ್ತಾಯ ಮಾಡುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಎಸ್‍ಡಿಪಿಐ ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಉಪಸ್ಥಿತರಿದ್ದರು.







