ಬಿಎಂಟಿಸಿ ಬಸ್‍ನಲ್ಲಿ ಆಕಸ್ಮಿಕ ಬೆಂಕಿ: ನಿರ್ವಾಹಕ ಸಜೀವ ದಹನ

ಬೆಂಗಳೂರು, ಮಾ. 10: ಬಿಎಂಟಿಸಿ ಬಸ್‍ನಲ್ಲಿ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಬಸ್ ಒಳಗೆ ಮಲಗಿದ್ದ ನಿರ್ವಾಹಕ ಸಜೀವ ದಹನವಾಗಿರುವ ಹೃದಯ ವಿದ್ರಾವಕ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ವರದಿಯಾಗಿದೆ.
ಇಲ್ಲಿನ ಬ್ಯಾಡರಹಳ್ಳಿ ಠಾಣಾವ್ಯಾಪ್ತಿಯ ಲಿಂಗಧೀರನಹಳ್ಳಿ ಬಸ್‍ನಿಲ್ದಾಣದಲ್ಲಿ ಈ ಘಟನೆ ನಡೆದಿದ್ದು, ಮುತ್ತಯ್ಯ (45) ಸಜೀವ ದಹನವಾಗಿರುವ ಬಸ್ ನಿರ್ವಾಹಕರೆಂದು ಗುರುತಿಸಲಾಗಿದೆ.
ಲಿಂಗಧೀರನಹಳ್ಳಿ ಡಿ ಗ್ರೂಪ್ ಲೇಔಟ್ ಬಸ್ ನಿಲ್ದಾಣದಲ್ಲಿ ಗುರುವಾರ ತಡರಾತ್ರಿ ಸುಮ್ಮನಹಳ್ಳಿ ಬಸ್ ಘಟಕಕ್ಕೆ ಸೇರಿದ್ದ ಬಿಎಂಟಿಸಿ ಬಸ್ ನಿಲ್ಲಿಸಲಾಗಿತ್ತು. ರಾತ್ರಿ ಊಟ ಮಾಡಿಕೊಂಡು ಬಸ್‍ನಲ್ಲಿ ನಿರ್ವಾಹಕ ಮುತ್ತಯ್ಯ ಮತ್ತು ಚಾಲಕ ಪ್ರಕಾಶ್ ಮಲಗಿದ್ದರು. ಮುಂಜಾನೆ 4 ಗಂಟೆ ವೇಳೆಗೆ ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಇಡೀ ಬಸ್‍ಗೆ ಬೆಂಕಿ ಆವರಿಸಿದ್ದು, ಅಗ್ನಿಯ ಕೆನ್ನಾಲಿಗೆಗೆ ಬಸ್‍ನೊಳಗಿದ್ದ ಮುತ್ತಯ್ಯ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅದೃಷ್ಟವಶಾತ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಸ್ತಿನಲ್ಲಿದ್ದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಸ್ಥಳಕ್ಕೆ ಕರೆಸಿ ಬೆಂಕಿ ನಂದಿಸಿದ್ದರು. ಬಸ್‍ನಲ್ಲಿ ಮುತ್ತಯ್ಯ ಮೃತಪಟ್ಟಿದ್ದರು. ಅವರ ದೇಹ ಸಂಪೂರ್ಣ ಸುಟ್ಟು ಹೋಗಿತ್ತು. ಬೆಂಕಿ ಹೊತ್ತಿಕೊಳ್ಳಲು ಕಾರಣ ಸದ್ಯಕ್ಕೆ ಗೊತ್ತಾಗಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.





