ಬ್ಯಾಂಕಿನ ರಜೆ ಬಗ್ಗೆ ಹಜ್ ಯಾತ್ರಿಗಳು ಆತಂಕ ಪಡುವ ಅಗತ್ಯವಿಲ್ಲ: ಸ್ಪಷ್ಟನೆ ನೀಡಿದ ಅಧಿಕಾರಿ
ಆನ್ ಲೈನ್ ಮೂಲಕವು ಎ.7ರವರೆಗೆ ಮುಂಗಡ ಪಾವತಿಗೆ ಅವಕಾಶ
ಬೆಂಗಳೂರು, ಎ.3:ಹಜ್ ಯಾತ್ರೆಗೆ ಆಯ್ಕೆಯಾಗಿರುವ ಯಾತ್ರಿಗಳು ಆನ್ ಲೈನ್ ಮೂಲಕವು ಎ.7ರವರೆಗೆ ಮೊದಲ ಕಂತು 81 ಸಾವಿರ ರೂ. ಜಮೆ ಮಾಡಲು ಅವಕಾಶ ಇರುವುದರಿಂದ ಬ್ಯಾಂಕಿನ ರಜೆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ರಾಜ್ಯ ಹಜ್ ಸಮಿತಿಯ ಕಾರ್ಯನಿರ್ವಾಹಕ ಅಧಿಕಾರಿ ಸರ್ಫರಾಝ್ ಖಾನ್ ತಿಳಿಸಿದ್ದಾರೆ.
"ವಾರ್ತಾಭಾರತಿ" ಯೊಂದಿಗೆ ಮಾತನಾಡಿದ ಅವರು, ಭಾರತೀಯ ಹಜ್ ಸಮಿತಿಯ ಸುತ್ತೋಲೆಯಲ್ಲಿ ಹಣ ಜಮೆ ಮಾಡುವ ವಿಚಾರದ ಕುರಿತು ಸ್ಪಷ್ಟವಾಗಿ ಮಾಹಿತಿ ನೀಡಲಾಗಿದೆ ಎಂದರು.
ಹಣವನ್ನು ಯಾವ ರೀತಿ ಜಮೆ ಮಾಡಬೇಕು ಎಂಬುದರ ಕುರಿತು ಈಗಾಗಲೇ ಪತ್ರಿಕೆಗಳ ಮೂಲಕ ಜಾಹೀರಾತು ನೀಡಲಾಗಿದೆ. ಹಣ ಜಮೆ ಮಾಡಿದ ಬಳಿಕ ಮೆಡಿಕಲ್ ಪ್ರಮಾಣ ಪತ್ರ ಹಾಗೂ ಪಾಸ್ ಪೋರ್ಟ್ ಅನ್ನು ಹಜ್ ಸಮಿತಿಗೆ ಸಲ್ಲಿಸಬೇಕಿದೆ ಎಂದು ಅವರು ಹೇಳಿದರು.
ಮೆಡಿಕಲ್ ಪ್ರಮಾಣ ಪತ್ರ ಪಡೆಯಲು ಬರುವಂತಹ ಹಜ್ ಯಾತ್ರಿಗಳಿಗೆ ಆದ್ಯತೆ ಮೇರೆಗೆ ತ್ವರಿತವಾಗಿ ಪ್ರಮಾಣ ಪತ್ರಗಳನ್ನು ಒದಗಿಸುವಂತೆ ಆಸ್ಪತ್ರೆಗಳಿಗೂ ತಿಳಿಸಲಾಗಿದೆ ಎಂದು ಸರ್ಫರಾಝ್ ಖಾನ್ ತಿಳಿಸಿದರು.
ಕೆಲವರು ಹಜ್ ಯಾತ್ರೆಗೆ ಅರ್ಜಿ ಸಲ್ಲಿಸಿದಾಗ ಪಾಸ್ ಪೋರ್ಟ್ ಹೊಂದಿರಲಿಲ್ಲ, ಕೆಲವರು ವಿದೇಶ ಪ್ರವಾಸದಲ್ಲಿದ್ದಾರೆ. ಅಂತಹವರು ಕರೆಗಳನ್ನು ಮಾಡಿ ನೆರವು ಕೋರುತ್ತಿದ್ದಾರೆ. ರಾಜ್ಯ ಹಜ್ ಸಮಿತಿ ಪ್ರತಿಯೊಬ್ಬ ಯಾತ್ರಿಯ ಬಗ್ಗೆಯೂ ಕಾಳಜಿ ವಹಿಸಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು.
ಆನ್ ಲೈನ್ ಮೂಲಕ ಹಣ ಜಮೆ ಮಾಡಲು ಕೊಡಲಾದ ರೆಫರೆನ್ಸ್ ಸಂಖ್ಯೆ ಜನರೇಟ್ ಆಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಹಜ್ ಸಮಿತಿಯ ರಾಜ್ಯ ಸಂಪರ್ಕಾಧಿಕಾರಿ ಫೈರೋಝ್ ಖಾನ್ 'ಸರ್ವರ್ ಸಮಸ್ಯೆಯಿದ್ದು, ಇಂದೇ ಸಮಸ್ಯೆ ಬಗೆಹರಿಯಲಿದೆ' ಎಂದು ಮಾಹಿತಿ ನೀಡಿದರು. ಇನ್ನು ಈ ಸಮಸ್ಯೆ ಎದುರಿಸುತ್ತಿರುವ ಹಜ್ ಯಾತ್ರಿಗಳು ಖುದ್ದು ಹಜ್ ಸಮಿತಿಯ ಕಚೇರಿಗೆ ಭೇಟಿ ನೀಡಿ ಅಥವಾ ಈ ಸಂಖ್ಯೆಗೆ 99006 73446 ಕರೆ ಮಾಡಿ ಮಾಹಿತಿ ಪಡೆಯಬಹುದು' ಎಂದು ತಿಳಿಸಿದರು.