ರಜನಿಕಾಂತ್ ಚಿತ್ರದಲ್ಲಿ ನಟಿಸಲಿದ್ದಾರೆ ನವಾಝುದ್ದೀನ್ ಸಿದ್ದೀಕಿ
ಬಾಲಿವುಡ್ನ ಪ್ರತಿಭಾವಂತ ನಟ ನವಾಝುದ್ದೀನ್ ಸಿದ್ದೀಕಿ ಸದ್ಯ ತನ್ನ ಕಾಲಿವುಡ್ ಪಾದಾರ್ಪಣೆಯ ಕುರಿತು ಬಹಳ ಕಾತರರಾಗಿದ್ದಾರೆ. ಅದರ ಹಿಂದಿನ ಕಾರಣವೆಂದರೆ, ಅವರು ತಮಿಳಿನ ಸೂಪರ್ಸ್ಟಾರ್ ರಜನಿಕಾಂತ್ ಜೊತೆ ನಟಿಸುವ ಅವಕಾಶವನ್ನು ತನ್ನದಾಗಿಸಿಕೊಂಡಿರುವುದು.
ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಸಿನೆಮಾದಲ್ಲಿ ಸಿದ್ದೀಕಿ ರಜನಿಕಾಂತ್ ಜೊತೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ, ಸಿಮ್ರನ್, ತ್ರಿಶಾ ಹಾಗೂ ಬಾಬಿ ಸಿಮ್ಹಾ ಕೂಡಾ ನಟಿಸುತ್ತಿದ್ದಾರೆ. ಮಧುರೈ, ಡಾರ್ಜಿಲಿಂಗ್ ಮುಂತಾದೆಡೆ ಚಿತ್ರೀಕರಣಗೊಳ್ಳಲಿರುವ ಈ ಚಿತ್ರಕ್ಕೆ ಸನ್ ಪಿಕ್ಚರ್ಸ್ ಹಣ ಹೂಡಿದೆ. ಸದ್ಯ ಈ ಸಿನೆಮಾಕ್ಕೆ ‘ತಲೈವರ್ 165’ ಎಂದು ಹೆಸರಿಡಲಾಗಿದೆ. ತಮಿಳಿನ ಯುವ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ತಿರು ಅವರ ಛಾಯಾಗ್ರಹಣವಿದೆ. ರಜನಿಕಾಂತ್ ಮತ್ತು ಅಕ್ಷಯ್ ಕುಮಾರ್ ನಟಿಸಿರುವ 2.0 ನವೆಂಬರ್ 29ರಂದು ತೆರೆಕಾಣುವ ನಿರೀಕ್ಷೆಯಿದೆ. ಈ ಸಿನೆಮಾದ ಮೂಲಕ ಕಿಲಾಡಿ ಅಕ್ಷಯ್ ಕುಮಾರ್ ಮೊದಲ ಬಾರಿ ತಮಿಳಿನಲ್ಲಿ ನಟಿಸುತ್ತಿದ್ದಾರೆ. ಅದೂ ಕೂಡಾ ಅವರು ಈ ಚಿತ್ರದಲ್ಲಿ ಖಳನ ಪಾತ್ರ ನಿಭಾಯಿಸುತ್ತಿದ್ದಾರೆ.