‘ಕುಳ್ಳ’ನಾಗಲಿರುವ ಶಾರೂಕ್ !
ಬಾಲಿವುಡ್ ಬಾದ್ಶಾ ಶಾರೂಕ್ಖಾನ್, ಫ್ಯಾನ್ ಚಿತ್ರದಲ್ಲಿ 23 ವರ್ಷದ ಯುವಕನ ಗೆಟಪ್ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದರು. ಹಾಲಿವುಡ್ ಮೇಕಪ್ ತಜ್ಞರು ಹಾಗೂ ಅತ್ಯಾಧುನಿಕ ವಿಎಫ್ಎಕ್ಸ್ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಂಡ ಈ ಚಿತ್ರದಲ್ಲಿ ಶಾರೂಕ್ ಗುರುತೇ ಸಿಗದಷ್ಟು ಬದಲಾಗಿದ್ದರು. ಇದೀಗ ಶಾರೂಕ್ ‘ತನುವೆಡ್ಸ್ ಮನು’ ಖ್ಯಾತಿಯ ನಿರ್ದೇಶಕ ಆನಂದ್ ಎಲ್.ರಾಯ್ ಅವರ ಚಿತ್ರದಲ್ಲಿ ಕುಳ್ಳನ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಶಾರೂಕ್ ಕುಳ್ಳಗೆ ಕಾಣಿಸುವಂತೆ ಮಾಡಲು ಆನಂದ್ ಅವರು ಹಾಲಿವುಡ್ನ ಸೂಪರ್ಹಿಟ್ ಚಿತ್ರ ‘ದಿ ಕ್ಯೂರಿಯಸ್ ಕೇಸ್ ಆಫ್ ಬೆಂಜಮಿನ್ ಬಟನ್’ನಲ್ಲಿ ಕೆಲಸ ಮಾಡಿದ್ದ ಮೇಕಪ್ ತಂಡವನ್ನು ಕರೆತರಲಿದ್ದಾರೆ. ಬೆಂಜಮಿನ್ ಬಟನ್ ಚಿತ್ರದ ನಾಯಕ ಬ್ರಾಡ್ಪಿಟ್ನನ್ನು ಹದಿಹರೆಯದ ಬಾಲಕನ ಮೇಕಪ್ನಲ್ಲಿ ಅತ್ಯಂತ ನೈಜವಾಗಿ ತೋರಿಸಿದ ಈ ತಂತ್ರಜ್ಞರ ಚಾಕಚಕ್ಯತೆಗೆ ಇಡೀ ಹಾಲಿವುಡ್ ಜಗತ್ತೇ ಅಚ್ಚರಿಗೊಂಡಿತ್ತು.ಈ ಚಿತ್ರದಲ್ಲಿ ಶಾರೂಕ್ಗೆ ನಾಯಕಿಯಾಗಿ ಪರಿಣತಿ ಚೋಪ್ರಾ ಆಯ್ಕೆಯಾಗಿದ್ದಾರೆಂಬ ವದಂತಿಗಳು ಕೇಳಿಬರುತ್ತಿವೆ. ಒಂದು ವೇಳೆ ಇದು ನಿಜವೇ ಆಗಿದ್ದಲ್ಲಿ, ಶಾರೂಕ್ ಜೊತೆ ಪರಿಣತಿಯ ಮೊದಲ ಚಿತ್ರ ಇದಾಗಲಿದೆ. ಇನ್ನೋರ್ವ ನಾಯಕಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸುವ ಸಾಧ್ಯತೆಯಿದೆಯೆನ್ನಲಾಗಿದೆ. ಅದೇನಿದ್ದರೂ, ಶಾರೂಕ್ ಕುಬ್ಜಾವತಾರದಲ್ಲಿ ಕಾಣಿಸಿಕೊಳ್ಳಲಿರುವುದು ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳ ಕುತೂಹಲವನ್ನು ಇಮ್ಮಡಿಗೊಳಿಸಿದೆ.