ರಜಿನಿಕಾಂತ್ ಹುಟ್ಟುಹಬ್ಬದಂದು '2.0' ಕಮಾಲ್
ಚೆನ್ನೈ, ಜೂ.22: "ದಂಗಲ್", "ಬಾಹುಬಲಿ-2" ಚಿತ್ರಗಳ ದಾಖಲೆಯನ್ನು ಮುರಿಯಲಿದೆ ಎಂದು ಹೇಳಲಾಗುತ್ತಿರುವ ಸಲ್ಮಾನ್ ಖಾನ್ ಅಭಿನಯದ "ಟ್ಯೂಬ್ ಲೈಟ್" ಚಲನಚಿತ್ರ ಶೀಘ್ರದಲ್ಲೇ ತೆರೆಕಾಣಲಿದೆ. ಆದರೆ ಈ ಎಲ್ಲಾ ಚಿತ್ರಗಳ ದಾಖಲೆಗಳನ್ನು ಮುರಿಯುತ್ತದೆ ಎಂದು ಸಿನಿತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿರುವ ರಜಿನಿಕಾಂತ್ ಅಭಿನಯದ "2.0" ಚಿತ್ರತಂಡ ಹೊಸ ಮಾಹಿತಿಯನ್ನು ಹೊರಹಾಕಿದೆ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ಗಳಿಂದಲೇ ಗಮನಸೆಳೆದಿರುವ "2.0" ಚಿತ್ರದ ಟ್ರೇಲರ್ ರಜನಿಕಾಂತ್ ಹುಟ್ಟುಹಬ್ಬದ ದಿನವಾದ ಡಿಸೆಂಬರ್ 12ರಂದು ಬಿಡುಗಡೆಯಾಗಲಿದೆ.
ಬಾಲಿವುಡ್, ಕಾಲಿವುಡ್, ಟಾಲಿವುಡ್ ಗಳಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ "2.0" ರಜನಿಕಾಂತ್ ಮತ್ತು ಐಶ್ವರ್ಯಾ ರೈ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ 'ಎಂದಿರನ್'ನ ಮುಂದುವರಿದ ಭಾಗವಾಗಿದೆ. 2018ರ ಜನವರಿ 25ರಂದು '2.0' ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್, ಬಾಲಿವುಡ್ ನಟ ಅಕ್ಷಯ್ ಕುಮಾರ್, ಆಮಿ ಜಾಕ್ಸನ್ ನಟಿಸಿದ್ದಾರೆ.
'2.0' ಚಿತ್ರ ಸುಮಾರು 7,000 ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎನ್ನಲಾಗಿದೆ.