ಉಪ್ಪಿನಂಗಡಿ ವರ್ತಕರ ಕುರಿತು ಸುಳ್ಳು ಸುದ್ದಿ ಆರೋಪ: ಕಾನೂನು ಕ್ರಮಕ್ಕೆ ಆಗ್ರಹ

ಉಪ್ಪಿನಂಗಡಿ: ಇಲ್ಲಿನ ಸುಮಾರು 32 ಅಂಗಡಿಗಳ ಹೆಸರು ಬಳಸಿ, "ನಮ್ಮ ಅಂಗಡಿಗಳಿಂದ ಯಾವುದೇ ಸಾಮಾಗ್ರಿಗಳನ್ನು ಮುಸ್ಲಿಮರಿಗೆ ಕೊಡುವುದಿಲ್ಲ. ನಮಗೆ ಹಿಂದೂ ಸಹೋದರರ ವ್ಯಾಪಾರ ಧಾರಾಳ" ಎನ್ನುವ ಸುಳ್ಳು ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟವರ ವಿರುದ್ಧ ಕ್ರಮಕೈಗೊಳ್ಳಲು ಉಪ್ಪಿನಂಗಡಿಯ ವರ್ತಕರು ಆಗ್ರಹಿಸಿದ್ದಾರೆ.
ಉಪ್ಪಿನಂಗಡಿಯ ಹಿಂದೂ ವರ್ತಕರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವರದಿಯನ್ನು ಉಪ್ಪಿನಂಗಡಿಯ ಎಲ್ಲಾ ವರ್ತಕರು ಖಂಡಿಸಿದ್ದು, ಇದರ ಬಗ್ಗೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ವರ್ತಕರ ನಿಯೋಗ ಪುತ್ತೂರು ಡಿವೈಎಸ್ಪಿ ಗಾನ ಕುಮಾರಿ ಮತ್ತು ಉಪ್ಪಿನಂಗಡಿ ಸಬ್ ಇನ್ಸ್ಪೆಕ್ಟರ್ ಕುಮಾರ್ ಕಾಂಬಳೆ ಅವರನ್ನು ಭೇಟಿಯಾಗಿ ದೂರನ್ನು ನೀಡಿ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದರು.
ನಿಯೋಗದಲ್ಲಿ ಯತೀಶ್ ಶೆಟ್ಟಿ ಸುವ್ಯ ಕ್ರೀಮ್ ಪಾರ್ಲರ್, ಸದಾನಂದ ಕಾರ್ ಕ್ಲಬ್, ಶಿವಪ್ರಸಾದ್ ರಾಮ್ ಮೆಡಿಕಲ್ಸ್, ಸಂದೀಪ್ ಶೆಟ್ಟಿ ಟಿಫಿನ್ ಹಾಲ್, ಪ್ರಕಾಶ್ ಮತ್ತು ಸಹೋದರರು ಅಶ್ವಿನಿ ಟ್ರೇಡರ್ಸ್, ಜಗದೀಶ್ ನಾಯಕ್ ಕರಾಯ, ಚೇತನ್ ನಾಯಕ್ ಕರಾಯ, ನಿತ್ಯಾನಂದ ಕಿಣಿ ಕರಾಯ, ಜಯರಾಮ ಅನ್ನಪೂರ್ಣ, ವೆಂಕಟರಮಣ ನಾಯಕ್ ಮತ್ತು ಬ್ರಿಜೇಶ್ ಬಿ ಡಾಟ್ ಉಪಸ್ಥಿತರಿದ್ದರು.
ಇವರೊಂದಿಗೆ ವರ್ತಕ ಸಂಘದ ಅಧ್ಯಕ್ಷರಾದ ಪ್ರಶಾಂತ್ ಡಿಕೋಸ್ತಾ, ಉಪಾಧ್ಯಕ್ಷರಾದ ಶಬೀರ್ ಕೆಂಪಿ, ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್ ಯೂನಿಕ್, ಸದಸ್ಯರಾದ ಇರ್ಷಾದ್ ಯು ಟಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಮಠ, ಗ್ರಾಮ ಪಂಚಾಯತ್ ಸದಸ್ಯರಾದ ತೌಸೀಫ್ ಯು ಟಿ, ಮಹಮ್ಮದ್ ಕೆಂಪಿ, ಇಬ್ರಾಹಿಂ ಆಚಿ, ಜಲೀಲ್ ಮುಕ್ರಿ, ಇಕ್ಬಾಲ್ ಪಾಂಡೇಲ್ ಉಪಸ್ಥಿತರಿದ್ದರು.








