ಎ.29 ರಿಂದ ಬಿಸಿರೋಡ್ ನಲ್ಲಿ “ಕರಾವಳಿ ಕಲೋತ್ಸವ-2022”

ಬಂಟ್ವಾಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ಚಿಣ್ಣರ ಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ (ರಿ) ಬಿಸಿ ರೋಡು ಇದರ ಆಶ್ರಯದಲ್ಲಿ “ಕರಾವಳಿ ಕಲೋತ್ಸವ-2022” ಕಾರ್ಯಕ್ರಮವು ಬಿಸಿ ರೋಡಿನ ಗೋಲ್ಡನ್ ಪಾರ್ಕ್ ಮೈದಾನದಲ್ಲಿ ಎಪ್ರಿಲ್ 29 ರಿಂದ ಮೇ 29 ರವರೆಗೆ ನಡೆಯಲಿದೆ ಎಂದು ಕರಾವಳಿ ಕಲೋತ್ಸವ ಸಮಿತಿ ಅಧ್ಯಕ್ಷ ಸುದರ್ಶನ್ ಜೈನ್ ತಿಳಿಸಿದರು.
ಬಿಸಿ ರೋಡಿನಲ್ಲಿ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಎ. 29 ರಂದು ಶುಕ್ರವಾರ ಸಂಜೆ 4.30ಕ್ಕೆ ಬಿಸಿ ರೋಡಿನ ಶ್ರೀ ಅನ್ನಪೂರ್ಣೇಶ್ವರಿ ಕಲಾ ಮಂಟಪದಿಂದ ಜಾನಪದ ದಿಬ್ಬಣ ಮೆರವಣಿಗೆ ನಡೆಯಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಉದ್ಘಾಟಿಸುವರು. ಸಂಜೆ 6.30ಕ್ಕೆ ಕೀರ್ತಿಶೇಷ ಡಾ ಏರ್ಯ ಲಕ್ಷ್ಮೀನಾರಾಯಣ ಆಳ್ವ ಕಲಾ ವೇದಿಕೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವರು. ಬಂಟ್ವಾಳ ಶಾಸಕ ಯು ರಾಜೇಶ್ ನಾಯಕ್ ಅಧ್ಯಕ್ಷತೆ ವಹಿಸುವರು ಎಂದರು.
ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಜನ ಸಾಂಸ್ಕೃತಿಕ ಕಾರ್ಯಕ್ರಮ ನೋಡಿ ಆನಂದಪಡಲಿ ಎಂಬ ಏಕೈಕ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದ ಜೈನ್ ಕಾರ್ಯಕ್ರಮ ಮೈದಾನದಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್, ವಸ್ತುಪ್ರದರ್ಶನ, ಆಹಾರ ಮಳಿಗೆಗಳು ಇರಲಿದ್ದು, ಇವುಗಳಿಗೆ ಅದರದ್ದೇ ಆದ ದರ ನಿಗದಿ ಇರುತ್ತದೆ ಎಂದರು.
ಒಂದು ತಿಂಗಳ ಕಾಲ ನಿರಂತರವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಪ್ರತೀ ವರ್ಷದಂತೆ ಈ ವರ್ಷವೂ ಕಾರ್ಯಕ್ರಮ ಯಶಸ್ವಿಯಾಗುವ ವಿಶ್ವಾಸ ಇದೆ ಎಂದ ಸುದರ್ಶನ್ ಜೈನ್, ಇದೇ ವೇಳೆ ಚಿಣ್ಣರಲೋಕ ನಿರಾಶ್ರಿತರ ಸೇವಾಶ್ರಮದ ನೀಲನಕ್ಷೆಯನ್ನು ಜಿಲ್ಲಾಧಿಕಾರಿ ಡಾ.ರಾಜೆಂದ್ರ ಅವರು ಅನಾವರಣಗೊಳಿಸುವರು.
ಚಿಣ್ಣರ ಚಿತ್ತಾರ ಚಿತ್ರಕಲೆ ಪ್ರದರ್ಶನವನ್ನು ಡಾ ಎಂ ಮೋಹನ್ ಆಳ್ವ ಉದ್ಘಾಟಿಸುವರು. ವಸ್ತು ಪ್ರದರ್ಶನ ಮಳಿಗೆಯನ್ನು ಮಾಜಿ ಸಚಿವ ಬಿ ರಮಾನಾಥ ರೈ ಉದ್ಘಾಟಿಸಲಿದ್ದು, ವಿಧಾನಸಭಾ ವಿಪಕ್ಷ ಉಪನಾಯಕ ಯು ಟಿ ಖಾದರ್ ಅಮ್ಯೂಸ್ ಮೆಂಟ್ ಪಾರ್ಕ್ ಉದ್ಘಾಟಿಸುವರು.
ಸಂಗೀತ ನಿರ್ದೇಶಕ ಗುರುಕಿರಣ್ ಅವರಿಗೆ ಕರಾವಳಿ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ, ಝೀ ಕನ್ನಡ ಸರಿಗಮಪ ಹಾಗೂ ಡ್ಯಾನ್ ಕರ್ನಾಟಕ ಡ್ಯಾನ್ಸ್ ಖ್ಯಾತಿಯ ಕ್ಷಿತಿ ಕೆ ರೈ ಧರ್ಮಸ್ಥಳ ಹಾಗೂ ಸಂಗೀತ, ಯಕ್ಷಗಾನ, ಭರತ ನಾಟ್ಯ, ಜಾನಪದ, ನಾಟಕ ಕ್ಷೇತ್ರದ ಕುಮಾರಿ ಶೃತಿ ದೇವಾಡಿಗ ಅವರಿಗೆ ಚಿಣ್ಣರ ಸೌರಭ ರಾಜ್ಯ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರತಿ ದಿನದ ಕಾರ್ಯಕ್ರಮಗಳಲ್ಲಿ ಯಕ್ಷನಾಟ್ಯ ವೈಭವ, ಜಾನಪದ ಪತ್ತಪದಗಳು, ಸರಿಗಮಪ ಸೀಸನ್ 5, ಕುಣಿತ ಭಜನೆ ಸ್ಪರ್ಧೆ, ಸಂಗೀತ ರಸಮಂಜರಿ, ಗೀತಾ ಸಾಹಿತ್ಯ ಸಂಭ್ರದು, ರಾಜ್ಯ ಮಟ್ಟದ ಫಿಲ್ಮ್ ಡ್ಯಾನ್ಸ್ ಸ್ಪರ್ಧೆ, ರಾಜ್ಯ ಮಟ್ಟದ ಜೋಡಿ ನೃತ್ಯ ಸ್ಪರ್ಧೆ, ಕರಾವಳಿ ಚಂಡೆ ಝೇಂಕಾರ, ಮಾಪಿಳ್ಳೆ ಪಾಟ್, ಕರಾವಳಿ ದಫ್ ಸ್ಪರ್ಧೆ, ಸಂಗೀತ ಲಹರಿ, ಚಿಣ್ಣರಲೋಕ ಯಕ್ಷೋತ್ಸವ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಈ ಸಂದರ್ಭ ಚಿಣ್ಣರ ಲೋಕ ಸೇವಾ ಟ್ರಸ್ಟ್ ಸ್ಥಾಪಕ ಹಾಗೂ ಕಲೋತ್ಸವ ಸಮಿತಿ ಪ್ರಧಾನ ಸಂಚಾಲಕ ಮೋಹನ ದಾಸ ಕೊಟ್ಟಾರಿ ಮುನ್ನೂರು, ಸ್ವಾಗತ ಸಮಿತಿ ಅಧ್ಯಕ್ಷ ಅಶೋಕ ಶೆಟ್ಟಿ ಸರಪಾಡಿ, ನಿರ್ದೇಶಕ ಮುಹಮ್ಮದ್ ನಂದಾದರ, ಚಿಣ್ಣರ ಅಧ್ಯಕ್ಷೆ ಕು. ಜನ್ಯ ಪ್ರಸಾದ್, ಮಂಜು ವಿಟ್ಲ ಉಪಸ್ಥಿತರಿದ್ದರು.







